ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಪರವಾನಗಿ ನೀಡುವುದಾಗಿ ಕೇಂದ್ರದ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ, ನೀರಾವರಿ ನಿಗಮದ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಬೆಂಗಳೂರು ಧರಣಿ ಹಿಂಪಡೆದಿದ್ದೇವೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಪರವಾನಗಿ ನೀಡುವುದಾಗಿ ಕೇಂದ್ರದ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ, ನೀರಾವರಿ ನಿಗಮದ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಬೆಂಗಳೂರು ಧರಣಿ ಹಿಂಪಡೆದಿದ್ದೇವೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೋರಮಂಗಲದ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದೆಹಲಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿ, 10 ದಿನಗಳಲ್ಲಿ ಪರವಾನಗಿ ನೀಡುವುದಾಗಿ ಹೇಳಿದ್ದಾರೆ. ಅವರು ನೀಡಿದ ಭರವಸೆ ಹುಸಿಯಾದರೆ ಮುಂದಿನ ಹೋರಾಟದ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಡಿ. 1ರಂದು ದೆಹಲಿ ಚಲೋ ಆಯೋಜಿಸಲಾಗಿತ್ತು. ಆದರೆ ದೆಹಲಿಯಲ್ಲಿ ಹವಾಮಾನ ವೈಪರೀತ ಮತ್ತು ಚಳಿ ಬಹಳ ಇರುವುದರಿಂದ ಬೆಂಗಳೂರಿನ ಕೋರಮಂಗಲದಲ್ಲಿರುವ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ ಮುಂದೆ ಡಿ. 2ರಂದು ಧರಣಿ ಆರಂಭಿಸಿದೆವು. ಅಲ್ಲಿಗೆ ಬಂದ ಪೊಲೀಸರು ಇಲ್ಲಿ ಧರಣಿ ನಡೆಸಲು ಅವಕಾವಿಲ್ಲ, ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುವಂತೆ ಹೇಳಿದರು. ಆದರೆ ನಾವು ಒಪ್ಪಲಿಲ್ಲ. ಹೀಗಾಗಿ ಪೊಲೀಸರು ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಆದರೆ ನಾವು ಅಲ್ಲಿಯೇ ಹೋರಾಟ ಮುಂದುವರಿಸಿದ್ದರಿಂದ ಕೇಂದ್ರ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ, ನೀರಾವರಿ ನಿಗಮದ ಅಧಿಕಾರಿಗಳು ಆಗಮಿಸಿ ಮಾತುಕತೆ ನಡೆಸಿದರು. ದೆಹಲಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಡಿ. 11ರ ವರೆಗೆ ಕಾಲವಕಾಶ ಕೇಳಿದ್ದರು. ಹೀಗಾಗಿ ಧರಣಿ ಕೈಬಿಟ್ಟು ಊರಿಗೆ ಮರಳಿದೆವು. ಡಿ. 11ಕ್ಕೆ ಕೇಂದ್ರ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಈ ಯೋಜನೆಗೆ 10 ದಿನಗಳಲ್ಲಿ ಪರವಾನಗಿ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಯ ವರೆಗೆ ಕಾದು ನೋಡುತ್ತೇವೆ. ಭರವಸೆ ಈಡೇರದಿದ್ದರೆ ಮುಂದಿನ ಹೋರಾಟದ ಕುರಿತು ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ರೈತ ಮುಖಂಡರಾದ ಮಲ್ಲಣ್ಣ ಅಲೇಕಾರ, ಸಿದ್ದಪ್ಪ ಕರಡಿಗುಡ್ಡ, ಗೋವಿಂದಪ್ಪ ಕಾಡಪ್ಪನವರ, ಸಿದ್ದಪ್ಪ ಬೇವೂರ, ನಾಗಪ್ಪ ರೋಗನ್ನವರ, ಫಕೀರಪ್ಪ ಬೆನ್ನೂರ, ಮಹಾಂತಗೌಡ ಭಾವಿ, ನಾಗನಗೌಡ ಪಾಟೀಲ, ದೇವಕ್ಕ ಗಾಳಿ, ಆನಂದಮ್ಮ ಹಿರೇಮಠ, ಸಾವಿತ್ರಿ ಸೋಮನಕಟ್ಟಿ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಹನುಮಂತ ಸರನಾಯ್ಕರ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಯಲ್ಲಪ್ಪ ಚಲವಣ್ಣವರ, ವಾಸು ಚವ್ಹಾಣ ಇದ್ದರು.