ಸಾರಾಂಶ
ಒಂಭತ್ತು ವರ್ಷಗಳಿಂದ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆ ಬಿಜೆಪಿ ಸೋಲಿಸುವುದು ಮಹದಾಯಿ ಹೋರಾಟಗಾರರ ಗುರಿಯಾಗಿದೆ.
ಧಾರವಾಡ:
ಕಳಸಾ-ಬಂಡೂರಿ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ರೈತ ಸೇನಾ ಕರ್ನಾಟಕ ನಿರ್ಧರಿಸಿದೆ.ಇಲ್ಲಿಯ ಮಯೂರ ರೆಸಾರ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಮಹದಾಯಿ ಹೋರಾಟಗಾರರ ಸಭೆಯಲ್ಲಿ ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಈ ತೀರ್ಮಾನ ಪ್ರಕಟಿಸಿದರು.
ಕಳೆದ ಒಂಭತ್ತು ವರ್ಷಗಳಿಂದ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆ ಬಿಜೆಪಿ ಸೋಲಿಸುವುದು ಮಹದಾಯಿ ಹೋರಾಟಗಾರರ ಗುರಿಯಾಗಿದೆ. ಬಿಜೆಪಿ ನಮ್ಮ ಬೇಡಿಕೆ ಕಡೆಗಣಿಸಿದೆ. ಹೋರಾಟವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತ ಬಂದಿದೆ. ಕೇಂದ್ರ ಹಾಗೂ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳಿದ್ದರೂ ಕಳಸಾ-ಬಂಡೂರಿ ಬೇಡಿಕೆ ಈಡೇರಲಿಲ್ಲ. ಇದು ರೈತರನ್ನು ನಿರ್ಲಕ್ಷಿಸಿದವರಿಗೆ ಪಾಠ ಕಲಿಸುವ ಸಂದರ್ಭ ಎಂದರು.ಸಭೆಯಲ್ಲಿದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಉತ್ತರ ಕರ್ನಾಟಕವನ್ನು ಕಡೆಗಣಿಸಿದ ಕೇಂದ್ರ ಸರ್ಕಾರ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಲಿಲ್ಲ. ಅಭಿವೃದ್ಧಿ ವಿಷಯಗಳನ್ನು ಬದಿಗಿಟ್ಟು ಕೇವಲ ರಾಮಮಂದಿರ, ಪಾಕಿಸ್ತಾನ, ತಾಲಿಬಾನ್ ಎಂದು ಜನರ ದಿಕ್ಕು ತಪ್ಪಿಸಿ ಚುನಾವಣೆ ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ರೈತ ಹೋರಾಟಗಾರರು ಕಾಂಗ್ರೆಸ್ ಬೆಂಬಲಿಸುತ್ತಿರುವುದು ನನ್ನ ವಿಶ್ವಾಸ ವೃದ್ಧಿಸಿದೆ. ಚುನಾವಣೆಯಲ್ಲಿ ಜಯಗಳಿಸಿದರೆ ಖಂಡಿತವಾಗಿ ಲೋಕಸಭೆಯಲ್ಲಿ ಮಹದಾಯಿ ನೀರಿಗಾಗಿ ಧ್ವನಿ ಎತ್ತುತ್ತೇನೆ ಎಂದರು.ನಾಲ್ಕು ಜಿಲ್ಲೆಗಳ ಒಂಭತ್ತು ತಾಲೂಕುಗಳ ನೂರಾರು ರೈತ ಮುಖಂಡರು, ರೈತ ಮಹಿಳೆಯರು ಸಭೆಗೆ ಆಗಮಿಸಿದ್ದರು.