ಸಾರಾಂಶ
ಗೋವಾ ಸಿಎಂ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದು ಹೇಳಿಕೆ ನೀಡಿರುವುದು ಅದು ಅವರ ವೈಯುಕ್ತಿಕ ಹೇಳಿಕೆಯೇ ಹೊರತು ಕೇಂದ್ರ ಸರ್ಕಾರದ ಹೇಳಿಕೆಯಲ್ಲ.
ಹುಬ್ಬಳ್ಳಿ: ಮಹದಾಯಿ ವಿಷಯ ಕುರಿತು ಗೋವಾ ಸಿಎಂ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಭಾರತ ಸರ್ಕಾರದ ಹೇಳಿಕೆಯಲ್ಲ. ಅದು ಅವರ ವೈಯುಕ್ತಿಕ ಹೇಳಿಕೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಾ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬೆಂಬಲವಾಗಿದ್ದಾರೆ ಎಂದು ನನ್ನ ನಿವಾಸದಲ್ಲಿ ಭೇಟಿಯಾದ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು.ಗೋವಾ ಸಿಎಂ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದು ಹೇಳಿಕೆ ನೀಡಿರುವುದು ಅದು ಅವರ ವೈಯುಕ್ತಿಕ ಹೇಳಿಕೆಯೇ ಹೊರತು ಕೇಂದ್ರ ಸರ್ಕಾರದ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗದೆ ವಾದ- ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಅವರ ವೈಯುಕ್ತಿಕ ಹೇಳಿಕೆಗೆ ರಾಜಕೀಯ ಬಣ್ಣ ಹಚ್ಚಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಕಳಸಾ- ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಈ ವಿಚಾರದಲ್ಲಿ ನಾನು ಸಹ ಕೇಂದ್ರ ಜಲಶಕ್ತಿ ಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ಅವರು ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.