ಸಾರಾಂಶ
ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ವಿವಾದವನ್ನು ಕಾನೂನಿನ ಮೂಲಕ ಬಗೆಹರಿಸುವ ಭರವಸೆ ನೀಡಿದ್ದು, ಇದು ಶೀಘ್ರದಲ್ಲೇ ಬಗೆಹರಿಯಲಿದೆ
ಹುಬ್ಬಳ್ಳಿ: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಕಳಸಾ-ಬಂಡೂರಿ ವಿಷಯವಾಗಿ ನೀಡಿರುವ ಹೇಳಿಕೆ ವೈಯಕ್ತಿಕವಾಗಿದ್ದು, ಕಾನೂನಿನ ಪ್ರಕಾರ ನೀರನ್ನು ಪಡೆಯುವ ವರೆಗೂ ಇದನ್ನು ರಾಜಕೀಕರಣ ಮಾಡಬೇಡಿ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿಸಿರುವ ಅವರು, ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನು ತರಬೇಕಾಗಿದೆ. ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಆಣೆಕಟ್ಟುಗಳನ್ನು ಕಟ್ಟಬೇಕಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿರುವ ಕಾನೂನು ತೊಡಕು ನಿವಾರಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದು, ಈ ವಿಷಯದಲ್ಲಿ ಅವರು ಸಫಲರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಳಸಾ-ಬಂಡೂರಿ ನೀರನ್ನು ತರುವ ಜವಾಬ್ದಾರಿ ಕರ್ನಾಟಕದ ಪ್ರತಿ ರಾಜಕಾರಣಿಗಳ ಮೇಲಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರಾಗಿ ಈಗ ಕೇಂದ್ರ ಮಂತ್ರಿಗಳಾಗಿರುವವರು. ಅವರು ಹಿಂದೆ ಈ ಹೋರಾಟದಲ್ಲಿ ಇದ್ದವರು. ಅವರಿಗೆ ಎಲ್ಲವೂ ತಿಳಿದಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ವಿವಾದವನ್ನು ಕಾನೂನಿನ ಮೂಲಕ ಬಗೆಹರಿಸುವ ಭರವಸೆ ನೀಡಿದ್ದು, ಇದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದಿರುವ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು, ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.