ನರಸತ್ತ ಸರ್ಕಾರದಿಂದ ಮಹದಾಯಿ ಜಾರಿ ಅಸಾಧ್ಯ: ಕೋಡಿಹಳ್ಳಿ ಚಂದ್ರಶೇಖರ

| Published : Jul 22 2024, 01:18 AM IST

ಸಾರಾಂಶ

ರೈತರು ಒಗ್ಗಟಾಗಿ ಆಳುವ ಸರ್ಕಾರವನ್ನು ಕಿತ್ತು ಹಾಕಿ ಯೋಜನೆ ಜಾರಿಗೆ ಸಜ್ಜಾಗಬೇಕು

ನರಗುಂದ: ರಾಜ್ಯ ಹಾಗೂ ಕೇಂದ್ರದಲ್ಲಿ ನರಸತ್ತ ಸರ್ಕಾರಗಳಿದ್ದು, ಈ ಸರ್ಕಾರಗಳಿಂದ ಮಹದಾಯಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ರೈತರು ಮತ್ತೊಂದು ಬಂಡಾಯ ಮಾಡಲು ಸಜ್ಜಾಗಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣದ) ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಅವರು ಭಾನುವಾರ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ನಾಲ್ಕು ದಶಕಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳದ ನೀರನ್ನು ತಂದು ಮಲಪ್ರಭಾ ಜಲಾಶಯಕ್ಕೆ ಜೋಡಣೆ ಮಾಡಬೇಕೆಂದು ಹೋರಾಟ ಮಾಡಿದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ಜಾರಿ ಮಾಡದೇ ರೈತ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿವೆ ಎಂದರು.

ಮಹದಾಯಿ ಯೋಜನೆ ಈ ನರಸತ್ತ ಸರ್ಕಾರಗಳಿಂದ ಜಾರಿ ಮಾಡಲು ಸಾಧ್ಯವಿಲ್ಲ. ಆದರಿಂದ ಈ ಭಾಗದ ರೈತರು ಒಗ್ಗಟಾಗಿ ಆಳುವ ಸರ್ಕಾರವನ್ನು ಕಿತ್ತು ಹಾಕಿ ಯೋಜನೆ ಜಾರಿಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಸರ್ಕಾರ ಓಬಿರಾಯನ ಕಾಲದ ಬೆಳೆ ಹಾನಿ ಪರಿಹಾರ ಪದ್ಧತಿ ತೆಗೆದು ಹಾಕಿ ಹೊಸ ಕಾನೂನು ರೂಪಿಸಿ ರೈತರಿಗೆ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಬೇಕು, ಸರ್ಕಾರ ಸ್ವಾಮಿನಾಥ ಆಯೋಗ ಜಾರಿ ಮಾಡಿ ರೈತರು ಬೆಳೆದ ಬೆಳೆ ಖರೀದಿಗೆ ಮುಂದಾಗಬೇಕು, ನರಗುಂದ ಈರಪ್ಪ ಕಡ್ಲಿಕೊಪ್ಪವರ ವೀರಗಲ್ಲನ್ನು ಸರ್ಕಾರಿ ಜಾಗೆಯಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.