11 ವರ್ಷದಿಂದ ಮಹದಾಯಿ ಹೋರಾಟ ಚಾಲನೆಯಲ್ಲಿದ್ದರೂ ಸಮಸ್ಯೆಗಳ ಕುರಿತು ರೈತಕುಲಕ್ಕೆ ಪರಿಹಾರ ಮಾರ್ಗಗಳು ತರುವಲ್ಲಿ ಈ ಭಾಗದ ಸಂಸದರು ಮತ್ತು ಶಾಸಕರು, ಮುಖ್ಯಮಂತ್ರಿಗಳು ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಕಾಲಹರಣ ಮಾಡುತ್ತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ನವಲಗುಂದ:

ಮಹದಾಯಿ, ಕಳಸಾ-ಬಂಡೂರಿ ಯೋಜನೆ ವಿಳಂಬ ಧೋರಣೆ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು ಪಟ್ಟಣದಲ್ಲಿ ಜ. 8, 9 ನಡೆಯುವ ಸಂಸದರ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸುವ ಕೇಂದ್ರ ಸಚಿವರು, ಶಾಸಕರ ವಿರುದ್ಧ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟದಿಂದ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಅವಕಾಶ ಹಾಗೂ ರಕ್ಷಣೆ ನೀಡುವಂತೆ ಹೋರಾಟಗಾರರು ಬುಧವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

11 ವರ್ಷದಿಂದ ಈ ಹೋರಾಟ ಚಾಲನೆಯಲ್ಲಿದ್ದರೂ ಸಮಸ್ಯೆಗಳ ಕುರಿತು ರೈತಕುಲಕ್ಕೆ ಪರಿಹಾರ ಮಾರ್ಗಗಳು ತರುವಲ್ಲಿ ಈ ಭಾಗದ ಸಂಸದರು ಮತ್ತು ಶಾಸಕರು, ಮುಖ್ಯಮಂತ್ರಿಗಳು ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಕಾಲಹರಣ ಮಾಡುತ್ತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೇವಲ ಭರವಸೆಗಳನ್ನು ನೀಡುತ್ತಿದ್ದು ಈಡೇರಿಸುತ್ತಿಲ್ಲ. ಹೀಗಾಗಿ ಹೋರಾಟ ನಡೆಸಲಾಗುವುದು ಎಂದರು.

ಅತಿವೃಷ್ಟಿಯಿಂದ ರೈತರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ಅಲ್ಪಸ್ವಲ್ಪ ಬೆಳೆ ಬೆಳೆದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದದಲ್ಲಿ ಘೋಷಿಸಿದ್ದ ರೈತರ ₹ 2 ಲಕ್ಷ ಸಾಲಮನ್ನಾ ಯೋಜನೆ ಇನ್ನೂ ಶೇ. 20ರಷ್ಟು ರೈತರಿಗೆ ತಲುಪಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಬಿಲ್ ತೆಗೆದು ಹಾಕಿ ಮರಳಿ ಸಾಲ ನೀಡಬೇಕು. ಜಾಮೀನು ಪಡೆಯುವುದು ಕೈ ಬಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದಾಗಿ ತಿಳಿಸಿದರು.

ಈ ವೇಳೆ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ, ಸುಭಾಸಚಂದ್ರಗೌಡ ಪಾಟೀಲ, ರವಿ ತೋಟದ, ಫಕೀರಗೌಡ ಹುನಸಿಕಟ್ಟಿ, ಬಾಳಪ್ಪ ಕುರಹಟ್ಟಿ, ಬಸಪ್ಪ ಬಳ್ಳೊಳ್ಳಿ, ಗಂಗಪ್ಪ ಸಂಗಟಿ, ನಾಗಲಿಂಗಪ್ಪ ನರಗುಂದ, ಈರಯ್ಯ ಗಣಾಚಾರಿ, ಗುರಪ್ಪ ಗಡ್ಡಿ, ಉಳಿವೆಪ್ಪ ಇಬ್ರಾಹಿಂಪುರ, ನಿಂಗಪ್ಪ ತೋಟದ, ಬಸಪ್ಪ ಮುಪ್ಪಯ್ಯನವರ ಇದ್ದರು.