ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿ ತುಮಕೂರು ಸಂಸದ ವಿ. ಸೋಮಣ್ಣ ಜಲಶಕ್ತಿ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದಾರೆ. ಇದು ಉತ್ತರ ಕರ್ನಾಟಕ ಜನರಿಗೆ ಹೊಸ ಆಶಾಭಾವನೆ ಮೂಡಿಸಿದ್ದು ಸೋಮಣ್ಣರತ್ತ ಚಿತ್ತ ನೆಟ್ಟಿದೆ. ಮುತುವರ್ಜಿ ವಹಿಸಿ ಅವರಾದರೂ ಮಹದಾಯಿ ಯೋಜನೆ ಕೆಲಸ ಆರಂಭಿಸುವರೇ ಎಂದು ಕಾಯ್ದು ಕುಳಿತಿದ್ದಾರೆ.
ಮಹದಾಯಿ ಯೋಜನೆ ಜಲಶಕ್ತಿ ಯೋಜನೆಯಡಿಯೇ ಬರುತ್ತದೆ. ಹೀಗಾಗಿ ಇಲ್ಲಿನ ಜನರ ನಿರೀಕ್ಷೆ ಸೋಮಣ್ಣರ ಮೇಲೆ ಹೆಚ್ಚಾಗಿದೆ. ಹಾಗೆ ನೋಡಿದರೆ ಮಹದಾಯಿ ವಿಷಯವಾಗಿ ಸಾಕಷ್ಟು ಕೆಲಸಗಳಾಗಿವೆ. 2018ರಲ್ಲೇ ತೀರ್ಪು ಬಂದಿದೆ. ಕೇಂದ್ರ ಸರ್ಕಾರದಿಂದ ಅಧಿಸೂಚನೆಯೂ ಆಗಿದೆ. ರಾಜ್ಯ ಸರ್ಕಾರ ಕಳುಹಿಸಿರುವ ಡಿಪಿಆರ್‌ನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಪರಿಸರ ಇಲಾಖೆಯಿಂದ ವಿನಾಯಿತಿ ಕೂಡ ಸಿಕ್ಕಿದೆ. ಇನ್ನು ಕೇವಲ ವನ್ಯಜೀವಿ ಸಂರಕ್ಷಣಾ ಮಂಡಳಿಯಿಂದ ಅನುಮತಿ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದೀಗ ಅವರಿಗೆ (ಜೋಶಿ) ಸೋಮಣ್ಣ ಸಾಥ್ ಕೊಟ್ಟು ಮತ್ತಷ್ಟು ಮುತುವರ್ಜಿ ವಹಿಸಿ ವನ್ಯಜೀವಿ ಮಂಡಳಿ ಬಳಿ ಇರುವ ರಾಜ್ಯದ ಪ್ರಸ್ತಾವನೆಗೆ ಅನುಮತಿ ಕೊಡಿಸಬೇಕು ಎಂಬುದು ಜನರ ನಿರೀಕ್ಷೆ.ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ;
ಇನ್ನು ಸೋಮಣ್ಣ ರೈಲ್ವೆ ರಾಜ್ಯ ಸಚಿವರೂ ಹೌದು. ಹಿಂದೆ ಸುರೇಶ ಅಂಗಡಿ ರಾಜ್ಯ ಸಚಿವರಾಗಿದ್ದಾಗಲೇ ಧಾರವಾಡ-ಬೆಳಗಾವಿ ರೈಲ್ವೆ ನೂತನ ಮಾರ್ಗಕ್ಕೆ ಕೇಂದ್ರದಿಂದ ಹಸಿರು ನಿಶಾನೆ ಪಡೆದಿದ್ದರು. ಅಂಗಡಿ ಅವರ ಕನಸಿನ ಯೋಜನೆ ಇದಾಗಿದ್ದು ಸಮೀಕ್ಷೆ ಕೂಡ ಮುಗಿದಿದೆ. ಮಾರ್ಗಮಧ್ಯೆದಲ್ಲಿ ಕೆಲವೊಂದಿಷ್ಟು ಕೈಗಾರಿಕೆಗಳು ಬರುವುದರಿಂದ ಮಾರ್ಗ ಕೂಡ ಕೊಂಚ ಬದಲಿಸಿ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಈ ವರೆಗೂ ಆರಂಭವಾಗುತ್ತಿಲ್ಲ. ₹ 985 ಕೋಟಿ ವೆಚ್ಚದ ಯೋಜನೆಯಿಂದ ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಮಧ್ಯೆ ನೇರವಾಗಿ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಇದರಿಂದ ಬರೋಬ್ಬರಿ ಒಂದುವರೆ ಗಂಟೆ ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಕಾಮಗಾರಿ ಚಾಲನೆಗೆ ಅಡ್ಡಿಯಾಗಿರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೆಲಸ ಶುರು ಮಾಡಲು ಕ್ರಮಕೈಗೊಳ್ಳಬೇಕು ಎಂಬುದು ಇಲ್ಲಿನ ಜನರ ಆಶಯ.ಹಾಗೆ ನೋಡಿದರೆ ಸುರೇಶ ಅಂಗಡಿ ಬೀಗರಾಗಿರುವ ಜಗದೀಶ ಶೆಟ್ಟರ್ ಅವರೇ ಇದೀಗ ಬೆಳಗಾವಿ ಎಂಪಿ ಆಗಿದ್ದು, ಅವರು ಕೂಡ ಸಾಥ್ ನೀಡಲಿದ್ದಾರೆ. ಹೀಗಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ಕಾಮಗಾರಿ ಶುರು ಮಾಡಲು ಕ್ರಮಕೈಗೊಳ್ಳಬೇಕು ಎಂಬುದು ಜನರ ಆಗ್ರಹ. ಇದರೊಂದಿಗೆ ಮಲೆನಾಡು-ಉತ್ತರ ಕರ್ನಾಟಕ ಸಂಪರ್ಕಿಸುವ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ಸೇರಿದಂತೆ ಈ ಭಾಗದ ಪ್ರಮುಖ ರೈಲು ಮಾರ್ಗಗಳ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗಬೇಕು ಎಂಬುದು ಉತ್ತರ ಕರ್ನಾಟಕ ಜನರ ನಿರೀಕ್ಷೆ. ಈ ನಿರೀಕ್ಷೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.
ವಿ. ಸೋಮಣ್ಣ ಅವರು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾಗಿದ್ದಾರೆ. ಮಹದಾಯಿ ಸೇರಿದಂತೆ ಸಾಕಷ್ಟು ನೀರಾವರಿ ಯೋಜನೆಗಳು ಅವರ ಇಲಾಖೆಯಡಿಯಲ್ಲೇ ಬರುತ್ತವೆ. ಅವುಗಳನ್ನು ಸಚಿವರು ಮುತುವರ್ಜಿ ವಹಿಸಿ ಚಾಲನೆ ನೀಡಬೇಕು. ಬೆಳಗಾವಿ-ಧಾರವಾಡ ರೈಲು ಮಾರ್ಗದ ಕೆಲಸವೂ ಶೀಘ್ರವೇ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ ಪಾಟೀಲ ಹೇಳಿದರು.