ಸಾರಾಂಶ
ಬೆಳೆ ಪರಿಹಾರ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮಾನದಂಡ ಬದಲಾವಣೆ ಮಾಡಿ ರೈತರಿಗೆ ಪರಿಹಾರ ನೀಡಲು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ
ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ಈಗಾಗಲೇ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಿದ ತಕ್ಷಣವೇ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಶಾಸಕ ಎನ್.ಎಚ್ ಕೋನರಡ್ಡಿ ಹೇಳಿದರು.
ಪಟ್ಟಣದ ಮಾಡಲ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ 79 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದಲ್ಲಿ ಮಾತನಾಡಿದರು.ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿ ರಸ್ತೆ ಹಾಗೂ ಸೇತುವೆಗಳು ಕಿತ್ತು ಹೋಗಿದ್ದು, ಅವುಗಳನ್ನು ದುರಸ್ತಿ ಮಾಡುವ ದೊಡ್ಡ ಜವಾಬ್ದಾರಿ ಇದ್ದು, ಬೆಳೆ ಪರಿಹಾರ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮಾನದಂಡ ಬದಲಾವಣೆ ಮಾಡಿ ರೈತರಿಗೆ ಪರಿಹಾರ ನೀಡಲು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.
ಸನ್ಮಾನ: ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದಲ್ಲಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿದ ಮೌಲಾಸಾಬ್ ಮಾಬುಸಾಬ್ ಒಂಟಿ, ಟಿಪ್ಪುಸುಲ್ತಾನ ಮೌಲಾಸಾಬ್ ಒಂಟಿ, ಮಾಬುಸಾಬ್ ಮೌಲಾಸಾಬ ಒಂಟಿ ಉರ್ಫ ತೇಕಡಿಮನಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಅಂಗವಿಕಲ ಮಕ್ಕಳಿಗೆ ವ್ಹೀಲ್ ಚೇರ್ ವಿತರಿಸಲಾಯಿತು.ತಹಸೀಲ್ದಾರ್ ಸುಧೀರ ಸಾವಕಾರ, ಭಾಗ್ಯಶ್ರೀ ಜಾಗೀರದಾರ, ಎಸ್.ಪಿ. ಪೂಜಾರ, ರವಿ ಕಪ್ಪತನವರ, ಪಿಎಸ್‌ಐ ಜನಾರ್ಧನ, ಶಿವಾನಂದ ಮಲ್ಲಾಡದ, ವರ್ಧಮಾನಗೌಡ ಹಿರೇಗೌಡ್ರ, ಸಂಗಪ್ಪ ಲಂಗೋಟೆ, ಗಾಯಿತ್ರಿ ಪಾಟೀಲ, ಎಸ್.ಎಸ್. ಹಿರೇಗೌಡ್ರ, ಶಿವಾನಂದ ತಡಸಿ, ಗೀತಾ ತೆಗ್ಯಾಳ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.