ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಹೊಸ ವರ್ಷದ ಪ್ರಯುಕ್ತ ಭಕ್ತರ ದಂಡು ಸಾಗರೋಪಾದಿಯಲ್ಲಿ ಭಾಗವಹಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಗೆ ನೂತನ ವರ್ಷದ ಪ್ರಯುಕ್ತ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪೂಜಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಸಾಲೂರು ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸರದಿ ಬೇಡ ಗಂಪಣ ಅರ್ಚಕರಿಂದ ಮಾದೇಶ್ವರನಿಗೆ ವಿಶೇಷ ಪೂಜೆ ಕಾರ್ಯಕ್ರಮವನ್ನು ಧಾರ್ಮಿಕವಾಗಿ ಹಮ್ಮಿಕೊಳ್ಳಲಾಗಿತ್ತು. ಮಲೆ ಮಾದೇಶ್ವರ ಬೆಟ್ಟದಲ್ಲಿ 2025ರ ನೂತನ ವರ್ಷದ ಮೊದಲ ದಿನ ರಾಜ್ಯದ ನಾನಾ ಭಾಗಗಳಿಂದ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.ವಿಶೇಷ ಹೂವಿನ ಅಲಂಕಾರ:
ಹೊಸ ವರ್ಷದ ಪ್ರಯುಕ್ತ ತಮಿಳುನಾಡಿನ ಉದ್ಯಮಿ ರಮೇಶ್ ಗೌಡ ಪ್ರತಿ ವರ್ಷದಂತೆ ಈ ವರ್ಷ ನೂತನ ವರ್ಷಕ್ಕೆ ಮಾದೇಶ್ವರ ಬೆಟ್ಟದ ಗರ್ಭಗುಡಿ ಸೇರಿದಂತೆ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ದರ್ಶನಕ್ಕೆ ಬಂದ ಭಕ್ತಾದಿಗಳು ವಿಶೇಷ ಹೂವಿನ ಅಲಂಕಾರದಲ್ಲಿ ದೇವರ ದರ್ಶನ ಪಡೆದು ಕಣ್ತುಂಬಿ ಕೊಂಡರು.ವಿಶೇಷ ದಾಸೋಹ ವ್ಯವಸ್ಥೆ: ನೂತನ ವರ್ಷದ ಪ್ರಾರಂಭದ ಮೊದಲ ದಿನವೇ ಮಾದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಾದೇಶ್ವರನ ದರ್ಶನ ಪಡೆದರು. ಬೆಳಗಿನ ಉಪಹಾರ ಉಪ್ಪಿಟ್ಟು, ಕೇಸರಿ ಬಾತ್, ಪೊಂಗಲ್, ಉಳಿ ಪುಳಿಯೋಗರೆ ,ತರಕಾರಿ ಬಾತ್, ಮಧ್ಯಾಹ್ನದ ಭೋಜನ ವ್ಯವಸ್ಥೆ, ಅನ್ನ ಸಾಂಬಾರ್, ಬೆಲ್ಲದ ಪಾಯಸ ಹಾಗೂ ಸಿಹಿ ಪೊಂಗಲ್ ಮಜ್ಜಿಗೆ ಹುಳಿ, ತರಕಾರಿ ಪಲ್ಯ ಸೇರಿದಂತೆ ವಿಶೇಷವಾಗಿ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಮಾವಾಸ್ಯೆ ಹಾಗೂ ಡಿ.31 ಹಾಗೂ 2025ರ ನೂತನ ವರ್ಷದ ಮೊದಲ ದಿನ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ. ಹೀಗಾಗಿ ಅಮಾವಾಸ್ಯೆ ಸೇರಿದಂತೆ ನೂತನ 2025ರ ವರ್ಷದ ಮೊದಲ ದಿನ ರಾಜ್ಯದ ವಿವಿಧೆಡೆಯಿಂದ ಭಕ್ತರು ಭೇಟಿ ನೀಡಿ ಮಾದೇಶ್ವರನ ದರ್ಶನ ಪಡೆದಿದ್ದಾರೆ. ಭಕ್ತರಿಗೆ ದರ್ಶನ ವ್ಯವಸ್ಥೆ ಹಾಗೂ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಸಕಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಶೇಷ ಗಮನ ಹರಿಸಲಾಗಿದೆ.ಎ.ಇ.ರಘು, ಕಾರ್ಯದರ್ಶಿ, ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವರ್ಷಾಚರಣೆ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡು ಮಾದೇಶ್ವರ ಬೆಟ್ಟ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ವಿಶೇಷವಾಗಿ ಧನುರ್ಮಾಸ ವಿಶೇಷ ಪೂಜೆಯ ಜೊತೆಗೆ ವರ್ಷದ ಮೊದಲ ದಿನ ದೇವಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಮೈಸೂರು ಮಾರಮ್ಮ ಹಾಗೂ ಚಿಕ್ಕಮ್ಮತಾಯಿ ದೊಡ್ಡಮ್ಮತಾಯಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಶನೇಶ್ವರ ಸ್ವಾಮಿ ಮತ್ತು ಚೆಲುವನಾರಾಯಣ ಸ್ವಾಮಿ ಸಿದ್ದಪ್ಪಾಜಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯ ಸೇರಿದಂತೆ ಪಟ್ಟಣದ ಮಲೆ ಮಾದೇಶ್ವರ ದೇವಾಲಯದಲ್ಲೂ ಸಹ ವಿಶೇಷ ಪೂಜೆ ಜರುಗಿತು. ಎಲ್ಲಿ ನೋಡಿದರೂ ದೇವಾಲಯಗಳಲ್ಲಿ ವರ್ಷದ ಮೊದಲ ದಿನ ಭಕ್ತರ ದಂಡೇ ಹರಿದು ಬಂದಿತ್ತು.