ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಪಂನ ನೂತನ ಉಪಾಧ್ಯಕ್ಷರಾಗಿ ರೈತ ಸಂಘದ ಬೆಂಬಲಿತ ಅಭ್ಯರ್ಥಿ ಮಹದೇವಮ್ಮ ಅವಿರೋಧವಾಗಿ ಆಯ್ಕೆಯಾದರು.ಗ್ರಾಪಂನ ಒಟ್ಟು 21 ಸದಸ್ಯರ ಪೈಕಿ ರೈತಸಂಘ ಬೆಂಬಲಿತ 18 ಹಾಗೂ ಜೆಡಿಎಸ್ ಬೆಂಬಲಿತ 3 ಸದಸ್ಯರಿದ್ದರು. ಅಧಿಕಾರ ಒಡಂಬಡಿಕೆ ಸೂತ್ರಧನ್ವಯ ಹಿಂದಿನ ಉಪಾಧ್ಯಕ್ಷೆ ಮಂಜುಳಾ ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮಹದೇವಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ ಎಇಇ ರಮ್ಯಾ ಪ್ರಕಟಿಸಿದರು.
ಬಳಿಕ ರೈತ ಸಂಘದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ನೂತನ ಉಪಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ಕೆ.ಬೆಟ್ಟಹಳ್ಳಿ ಗ್ರಾಪಂ ಸದಸ್ಯರ ಬೆಂಬಲದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯರವರ ಆದೇಶದ ಮೇರೆಗೆ ಉಪಾಧ್ಯಕ್ಷರಾಗಿ ನಾನು ಆಯ್ಕೆಯಾಗಿದ್ದೇನೆ. ಶಾಸಕರ ಮಾರ್ಗದರ್ಶನದಲ್ಲಿ ಗ್ರಾಪಂ ಎಲ್ಲಾ ಸದಸ್ಯರ ಸಹಕಾರದೊಂದಿಗೆ ನನ್ನ ಅವಧಿಯಲ್ಲಿ ಪಂಚಾಯ್ತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಕ್ಷಪಾತ ಮಾಡದೆ ಕಾರ್ಯ ನಿರ್ವಹಿಸುತ್ತೇನೆ. ಅಗತ್ಯ ಮೂಲ ಸೌಕರ್ಯ ಒದಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಈ ವೇಳೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಗ್ರಾಪಂ ಸದಸ್ಯರಾದ ಲಕ್ಷ್ಮೀ, ಲತಾ, ಸವಿತಾ, ಸೌಮ್ಯ, ಸುಚಿತ್ರಾ, ಮಾಕೇಗೌಡ, ಮಂಜುಳಾ, ಆನಂದ, ಅಶೋಕ, ಕೆಂಪರಾಜು, ರೈತಸಂಘದ ಮುಖಂಡರಾದ ಬಿ.ಟಿ.ಶಿವಣ್ಣ, ಪ್ರಭುಸ್ವಾಮಿ, ರಮೇಶ್, ಕಾಳೇಗೌಡ, ಚಲುವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.ಕಾರ್ಖಾನೆಗೆ ಕಬ್ಬು ನುರಿಯುವಿಕೆಗೆ ಜ.31ಅಂತಿಮ
ಕಿಕ್ಕೇರಿ:ಸಮೀಪದ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಯುವಿಕೆಗೆ ಜ.31 ಅಂತಿಮ ದಿನವಾಗಿದೆ. ಅಷ್ಟರೊಳಗೆ ರೈತರು ಕಬ್ಬು ಸರಬರಾಜು ಮಾಡಬೇಕು ಎಂದು ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ತಿಳಿಸಿದ್ದಾರೆ. ಕಾರ್ಖಾನೆ ವ್ಯಾಪ್ತಿ ಕಬ್ಬು ಸರಬರಾಜು ಗಣನೀಯವಾಗಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ತಾಲೂಕುಗಳಲ್ಲಿ ಉಳಿದಿರುವ ಎಲ್ಲಾ ಕಬ್ಬನ್ನು ಜ.31ರ ಸಂಜೆ 6 ರೊಳಗೆ ಸರಬರಾಜು ಮಾಡಲು ಪ್ರಕಟಣೆಯಲ್ಲಿ ಕೋರಿದ್ದಾರೆ. ತದನಂತರ ಕಬ್ಬು ಉಳಿದರೆ ಕಾರ್ಖಾನೆ ಜವಾಬ್ದಾರರಾಗುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಕಬ್ಬು ಅರೆಯಲು ಸಹಕರಿಸಿದ ರೈತರು, ಕಬ್ಬು ಕಟಾವುದಾರರು, ಸಾಗಾಣಿಕೆದಾರರು, ಕಾರ್ಖಾನೆ ಸಿಬ್ಬಂದಿಗಳು, ಆಡಳಿತ ಮಂಡಳಿ, ಕಾರ್ಮಿಕ ವರ್ಗದವರು, ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.