ಸಾರಾಂಶ
ಮತ್ತೊಮ್ಮೆ ನರೇಂದ್ರ ಮೋದಿ ಅವರು ಭವ್ಯ ಭಾರತದ ಪ್ರಧಾನಿಗಳಾಗುವರು. ಇಡೀ ದೇಶ ಇನ್ನಷ್ಟು ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ. ರೈತರಿಗೆ ಕೇಂದ್ರದಿಂದ ಹಲವು ಯೋಜನೆಗಳುದೊರಕಲಿವೆ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಂಘಟಿತ ಪ್ರಯತ್ನ ಮಾಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಪದಾಧಿಕಾರಿಗಳ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಸೂಚನೆಯ ಮೇರೆಗೆ ನಾವೆಲ್ಲರೂ ನಿರೀಕ್ಷೆಗೂ ಮೀರಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಕನಿಷ್ಠ 25 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಗೊಳಿಸುವ ಕೆಲಸ ಮಾಡೋಣ ಎಂದರು.ಮತ್ತೊಮ್ಮೆ ನರೇಂದ್ರ ಮೋದಿ ಅವರು ಭವ್ಯ ಭಾರತದ ಪ್ರಧಾನಿಗಳಾಗುವರು. ಇಡೀ ದೇಶ ಇನ್ನಷ್ಟು ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ. ರೈತರಿಗೆ ಕೇಂದ್ರದಿಂದ ಹಲವು ಯೋಜನೆಗಳುದೊರಕಲಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿಯೂ ಯುವಕರು ಉತ್ಸಾಹಿಗಳಂತೆ ಕೆಲಸ ಮಾಡುತ್ತಿದ್ದು ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿಯೂ ವೋಟ್ ಆಫ್ ಫರ್ಸಂಟೇಜ್ ಹೆಚ್ಚಾಗಿದೆ. ಯುವಕರು ಬಿಜೆಪಿಗೆ ಮತ ನೀಡುವ ಮೂಲಕ ಯುವ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ. ವಿಜಯೇಂದ್ರ ಅವರು ತಾವು ಅಧ್ಯಕ್ಷರಾದ ಬಳಿಕ ಒಂದು ದಿನವೂ ಕೂಡ ವಿಶ್ರಾಂತಿ ಪಡೆಯದೆ ದಿನದ 24 ಗಂಟೆಯೂ ರಾಜ್ಯದ ಪ್ರತೀ ಕ್ಷೇತ್ರ ಸುತ್ತುವ ಮೂಲಕಪಕ್ಷ ಸಂಘಟಿಸಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಹರ್ಷಿತರಾಗಿದ್ದೇವೆ ಎಂದರು.ಮುಂದಿನ ದಿನಗಳಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರೂ ಸಂಘಟನೆಯ ನಿಮಿತ್ತ ಕಾರ್ಯ ಪ್ರವೃತ್ತರಾಗಲು ನಮ್ಮೆಲ್ಲರಿಗೂ ಕರೆ ನೀಡಿದ್ದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲರೂ ಮತ್ತೆ ಸಂಘಟನೆಯತ್ತ ಹೊರಡಬೇಕಿದೆ. ಜಿಲ್ಲಾ ವಿಭಾಗದಲ್ಲಿ 11 ಬೂತ್ ಗಳು ಈ ಚುನಾವಣೆಯಲ್ಲಿ ಇರಲಿದ್ದು, ಪ್ರತೀತಾಲೂಕುವಾರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚುನಾವಣಾ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದುಪದಾಧಿಕಾರಿಗಳಲ್ಲಿ ಅವರು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿದ್ದೀರಿ. ಚುನಾವಣೆಗೆ ಹಗಲಿರುಳು ಸಮಯ ಕೊಟ್ಟು ಪ್ರಮಾಣಿಕ ಕೆಲಸ ಮಾಡಿದ್ದೀರಿ. ಇದಕ್ಕೆ ತಮ್ಮೆಲ್ಲರಿಗೂ ವಂದಿಸುತ್ತೇನೆ ಎಂದು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಮುಂದಿನದಿನಗಲ್ಲಿ ಪಕ್ಷಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯೋಣ. ದೇಶ ಕಟ್ಟಲು ಬದ್ದರಾಗೋಣ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಕಿರಣ್ ಜಯರಾಮೇಗೌಡ, ಪಕ್ಷದ ಜಿಲ್ಲಾ ಪದಾಧಿಕಾರಿಗಳು, ತಾಲೂಕುವಾರು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.