ಸಾರಾಂಶ
ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಮತ್ತೆ ಸಿಐಡಿ ವಶಕ್ಕೆ ನೀಡಿದ್ದು, ಇನ್ನಿಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮುರುಗೇಶನ್ ಮತ್ತು ಪ್ರಭಾಕರ್‌ನನ್ನು ಸಿಐಡಿ ವಶಕ್ಕೆ ನೀಡಿದ್ದು, ಮದನ್‌ಕುಮಾರ್ ಮತ್ತು ರಾಧಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಮಹದೇವಯ್ಯ ಕೊಲೆ ಪ್ರಕರಣದ ತನಿಖೆಯನ್ನು ಗುರುವಾರ ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ನಾಲ್ವರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ ಆರೋಪಿಗಳನ್ನು 3 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿತ್ತು.
ಶನಿವಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿಗಳನ್ನು ನಗರದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು.ರಾಧಾಳನ್ನು ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದು, ಮದನ್ ಕುಮಾರ್‌ನನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಮುರುಗೇಶನ್ ಹಾಗೂ ಪ್ರಭಾಕರ್‌ನನ್ನು ಸೋಮವಾರದವರೆಗೆ ಸಿಐಡಿ ವಶಕ್ಕೆ ನೀಡಲಾಗಿದೆ.
ಸ್ಥಳ ಪರಿಶೀಲಿಸಿದ ಅಧಿಕಾರಿಗಳು:ಪ್ರಕರಣ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು, ಆರೋಪಿಗಳನ್ನು ಕೃತ್ಯ ನಡೆಸಿದ ಸ್ಥಳಕ್ಕೆ ಕರೆದೊಯ್ದು ಮಹಜರ್ ನಡೆಸಿದ್ದಾರೆ. ಚಕ್ಕೆರೆ ಗ್ರಾಮದ ಮಹದೇವಯ್ಯ ಅವರ ತೋಟದ ಮನೆ, ರಾಮಾಪುರ, ಶವ ಎಸೆದಿದ್ದ ಅರಣ್ಯ ಪ್ರದೇಶ ಮೊದಲಾದ ಸ್ಥಳಗಳಿಗೆ ಆರೋಪಿಗಳ ಸಮೇತ ತೆರಳಿ ಮಹಜರು ನಡೆಸಿದ್ದು, ತನಿಖೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.(ಮಗ್‌ಶಾಟ್ ಪೋಟೋ ಮಾತ್ರ)