ಅಭಿವೃದ್ಧಿ ಚಿಂತಕ ಎನಿಸಿದ್ದ ಮಹದೇವಪ್ರಸಾದ್‌!

| Published : Jan 03 2025, 12:30 AM IST

ಸಾರಾಂಶ

ಜಿಲ್ಲಾ ರಾಜಕಾರಣದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದ ಜೊತೆಗೆ ಸದಾ ಅಭಿವೃದ್ಧಿ ಗುಂಗಿನಲ್ಲಿದ್ದ ವರ್ಣ ರಂಜಿತ ರಾಜಕಾರಣಿ ದಿ.ಎಚ್.ಎಸ್.ಮಹದೇವಪ್ರಸಾದ್‌ ಇಂದಿಗೆ (ಜ.೩) ಸಾವನ್ನಪ್ಪಿ, 8ನೇ ವರ್ಷವಾಗುತ್ತಿದೆ.

ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಜಿಲ್ಲಾ ರಾಜಕಾರಣದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದ ಜೊತೆಗೆ ಸದಾ ಅಭಿವೃದ್ಧಿ ಗುಂಗಿನಲ್ಲಿದ್ದ ವರ್ಣ ರಂಜಿತ ರಾಜಕಾರಣಿ ದಿ.ಎಚ್.ಎಸ್.ಮಹದೇವಪ್ರಸಾದ್‌ ಇಂದಿಗೆ (ಜ.೩) ಸಾವನ್ನಪ್ಪಿ, 8ನೇ ವರ್ಷವಾಗುತ್ತಿದೆ.

ಕ್ಷೇತ್ರದ ಅಮ್ಮಾ ಎಂದೇ ಹೆಸರಾದ ಮಾಜಿ ಸ್ಪೀಕರ್‌ ಕೆ.ಎಸ್.ನಾಗರತ್ನಮ್ಮ ನಿಧನದ ಬಳಿಕ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್‌ ಗೆಲುವಿನ ನಂತರ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದರು. ಅಲ್ಲದೆ ಜಿಲ್ಲಾ ರಾಜಕಾರಣದ ಸಂಪೂರ್ಣ ಹಿಡಿತ ಹೊಂದಿದ್ದರು. ಚಾಮರಾಜನಗರ ಲೋಕಸಭೆ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಬಹುತೇಕ ಚುನಾವಣೆಗಳಲ್ಲಿ ಜಯಭೇರಿ ಬಾರಿಸಲು ಪ್ರಮುಖ ಕಾರಣರಾಗಿದ್ದರು.

೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್‌ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಜಿಲ್ಲೆಯ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ೨೦೧೩ರಿಂದ ೧೮ ರ ತನಕ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದು, ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಚಾಲನೆ, ಎಂಜಿನಿಯರ್‌ ಹಾಗೂ ಮೆಡಿಕಲ್‌ ಕಾಲೇಜು, ಚಾಮರಾಜನಗರ, ಗುಂಡ್ಲುಪೇಟೆ ಬಹುಗ್ರಾಮ ಯೋಜನೆ ಆರಂಭಿಸುವಲ್ಲಿ ಮಹದೇವಪ್ರಸಾದ್‌ ಪಾತ್ರ ಸಾಕಷ್ಟಿತ್ತು.

ಮಹದೇವಪ್ರಸಾದ್‌ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದರು. ನಂತರ ಬಂದ ೨೦೧೮ರ ಸಾರ್ವತ್ರಿಕ ಚುನಾವಣೆಯಲ್ಲಿ ಡಾ.ಗೀತಾಮಹದೇವ ಪ್ರಸಾದ್‌ ಸೋತು ಒಂದು ಬಾರಿ ಶಾಸಕ ಸ್ಥಾನ ಮಹದೇವಪ್ರಸಾದ್‌ ಕುಟುಂಬಕ್ಕೆ ಕೈ ತಪ್ಪಿತ್ತು. ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹದೇವ ಪ್ರಸಾದ್‌, ಡಾ.ಗೀತಾಮಹದೇವಪ್ರಸಾದ್‌ರ ದಂಪತಿಯ ಏಕೈಕ ಪುತ್ರ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾಗುವ ಮೂಲಕ ಒಂದು ಬಾರಿ ಕೈ ತಪ್ಪಿದ್ದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಗಣೇಶ್‌ ಬಲಿಷ್ಠ:

ಎಚ್.ಎಂ.ಗಣೇಶ್‌ ಪ್ರಸಾದ್‌ ಕ್ಷೇತ್ರದ ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಕಷ್ಟ ಸುಖಗಳಿಗೆ ೨೦೧೮ ರಿಂದ ಸ್ಪಂದಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿ ಇದೀಗ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಮಹದೇವಪ್ರಸಾದ್‌ ಹಾದಿಯಲ್ಲಿಯೇ ಗಣೇಶ್‌ ಪ್ರಸಾದ್‌ ಕೂಡ ಸಾಗುತ್ತಿದ್ದು ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕಾರ್ಯಕರ್ತರ ಹಿತ ಕಾಯ್ದುಕೊಂಡು ಸಾಗುತ್ತಿದ್ದಾರೆ. ಮಹದೇವಪ್ರಸಾದ್‌ರಂತೆ ಜಾತ್ಯಾತೀತ ನಿಲುವು ಹೊಂದಿದ್ದು, ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದು ಅಪ್ಪನ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಎಲ್ಲ ಜಾತಿ, ವರ್ಗದ ಜನರನ್ನು ವಿಂಗಡಿಸಿಲ್ಲ. ಜೊತೆಗೆ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತ ಕೂಡ ಆಗದೆ ಜಾತ್ಯಾತೀತ ತತ್ವ ಹಾಗೂ ಕಷ್ಟ ಎಂದು ಹೇಳಿಕೊಂಡು ಬರುವ ಮಂದಿಗೆ ಇಲ್ಲ ಎನ್ನದೆ ಬರಿಗೈಲಿ ಕಳುಹಿಸುವುದು ತೀರ ವಿರಳ.

ರಾಜಕಾರಣಿಗಳ ಉತ್ತಮ

ಸಂಪರ್ಕ ಹೊಂದಿದ್ದ ನಾಯಕ

ಮಾಜಿ ಸಚಿವ, ಚಾಣಾಕ್ಷ ರಾಜಕಾರಣಿ ಎಚ್.ಎಸ್.ಮಹದೇವಪ್ರಸಾದ್ ರಾಜ್ಯ ರಾಜಕಾರಣದಲ್ಲಿ ರಾಜ್ಯದ ಉದ್ದಗಲಕ್ಕೂ ರಾಜಕಾರಣಿಗಳ ಉತ್ತಮ ಸಂಪರ್ಕ ಹೊಂದಿದ್ದ ನಾಯಕ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವ ರೂಪಿಸಿಕೊಂಡು ಸತತ ಐದು ಬಾರಿ ವಿವಿಧ ಚಿಹ್ನೆಗಳಿಂದ ಗೆದ್ದು ಬೀಗಿದ ಈ ಭಾಗದ ಜನರ ಪ್ರೀತಿ ಗಳಿಸಿದ್ದ ಜನ ನಾಯಕರಾಗಿದ್ದರು. ರಾಜ್ಯದ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ.ಎಚ್,ಪಟೇಲ್, ಸಿದ್ದರಾಮಯ್ಯರಂತ ಅನೇಕ ನಾಯಕರ ಒಡನಾಟ ಹೊಂದಿದ್ದರು.

ಎಚ್.ಎಸ್.ಮಹದೇವಪ್ರಸಾದ್ ಶಾಸಕರಾಗುವ ತನಕ ಸುಮಾರು ೧೫ ವರ್ಷಗಳಿಗೂ ಹೆಚ್ಚು ಕಾಲ ಗುಂಡ್ಲುಪೇಟೆಯ ತಾಲೂಕು ಕಚೇರಿ ಬಳಿಯ ಆಲದ ಮರದ ಕೆಳಗೆ ಅವರ ಹೆಜ್ಜೆ ಗುರುತುಗಳು ಅಂದಿನ ಕಥೆ ಹೇಳುತ್ತವೆ. ಎಚ್.ಎನ್.ಶ್ರೀಕಂಠಶೆಟ್ಟಿ ಎರಡು ಬಾರಿ ಸೋತರು. ನಂತರ ಎಚ್.ಎಸ್.ಮಹಾದೇವಪ್ರಸಾದ್ ಎರಡು ಬಾರಿ ಚುನಾವಣೆಯಲ್ಲಿ ಪರಾಭವಗೊಂಡರೂ ಸೋಲಿಗೆ ಅಂಜದೆ ಪ್ರತಿ ಹಳ್ಳಿಗಳ ಜನರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸಾಗಿದರು. ೧೯೯೪ ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಾಸಕರಾದರು.

ಅಲ್ಲಿಂದ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಆನೆ ನಡೆದದ್ದೇ ದಾರಿ ಎಂಬಂತೆ ರಾಜಕಾರಣದಲ್ಲಿ ಮಿಂಚಿದರು. ೧೯೯೪, ೧೯೯೯, ೨೦೦೪, ೨೦೦೮, ೨೦೧೩ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತತವಾಗಿ ಐದು ಬಾರಿ ಗೆದ್ದು ಶಾಸಕರಾದರು. ಎರಡು ಬಾರಿ ಸಚಿವರಾಗಿ ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ತೊಡಗಿಸಿಕೊಂಡರು.ನಂಬಿಕೆಯ ನಾಯಕ:

ಎಚ್.ಎಸ್.ಮಹದೇವಪ್ರಸಾದ್ ಶಾಸಕರಾದ ಬಳಿಕ ಫೈವ್ ಮ್ಯಾನ್ ಆರ್ಮಿಯ ತಂಡದಲ್ಲಿದ್ದ ಎ.ಸಿದ್ದರಾಜು (ಸಂಸದ), ಎಚ್.ಎಸ್.ನಂಜಪ್ಪ (ತಾಪಂ ಅಧ್ಯಕ್ಷ), ಬಿ.ಎಂ.ಮುನಿರಾಜು (ಜಿಪಂ ಅಧ್ಯಕ್ಷ), ಜಿ.ಕೆ.ನಾಜೀಮುದ್ದೀನ್ (ಪುರಸಭೆ ಅಧ್ಯಕ್ಷ) ಅಧಿಕಾರ ಸಿಗುವಲ್ಲಿ ಪ್ರಸಾದ್ ಪಾತ್ರ ದೊಡ್ಡದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್.ಎಸ್.ಮಹದೇವಪ್ರಸಾದ್ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಸಮಯದಲ್ಲಿ ೨೦೧೭ರ ಜ.೩ರಂದು ಚಿಕ್ಕಮಗಳೂರಿನ ಸೆರಾಯಿ ರೆಸಾರ್ಟ್‌ನಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದರು.

ಇಂದು 8ನೇ ವರ್ಷದ ಪುಣ್ಯಾರಾಧನೆ

ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್‌ರ 8ನೇ ವರ್ಷ ಪುಣ್ಯಾರಾಧನೆ ಜ.೩ ಬುಧವಾರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಹಾಲಹಳ್ಳಿ ಗ್ರಾಮದ ಎಚ್.ಎನ್.ಶ್ರೀಕಂಠಶೆಟ್ಟರ ಸಮುದಾಯ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ 8ನೇ ವರ್ಷದ ಪುಣ್ಯಾರಾಧನೆಯನ್ನು ಕುಟುಂಬಸ್ಥರು ಆಯೋಜಿಸಿದ್ದು ಮಧ್ಯಾಹ್ನ ೧೨ ಗಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಿದ್ದಾರೆ.

ದಿ.ಎಚ್.ಎಸ್.ಮಹದೇವಪ್ರಸಾದ್‌ರ 8ನೇ ವರ್ಷದ ಪುಣ್ಯಾರಾಧನೆಗೆ ಕ್ಷೇತ್ರದ ಹಾಗೂ ಜಿಲ್ಲೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಮಾಜಿ ಸಚಿವ ಡಾ.ಗೀತಾಮಹದೇವಪ್ರಸಾದ್ ಹಾಗೂ ಎಚ್.ಎಸ್. ನಂಜುಂಡಪ್ರಸಾದ್, ಡಾ.ಕೆ.ಎನ್.ಚಂದ್ರಚೂಡ,ಶಾಸಕರ ಪತ್ನಿ ವಿದ್ಯಾ ಗಣೇಶ್‌ ಕೋರಿದ್ದಾರೆ.