ಮಹಾಧಿವೇಶನ ಕೆಲವರ ವೈಭ‍ವೀಕರಣಕ್ಕಷ್ಟೇ ಸೀಮಿತ

| Published : Dec 31 2023, 01:30 AM IST

ಸಾರಾಂಶ

ಎಲ್ಲಾ ಒಳ ಪಂಗಡಗಳ ಒಳಗೊಂಡು ವೀರಶೈವ ಸಮಾಜವಾಗುತ್ತದೆಂಬುದನ್ನು ಯಾರೂ ಮರೆಯಬಾರದು. 93 ವರ್ಷದ ಹಿರಿಯರಾದ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಹಾಧಿವೇಶನ ನಡೆಸಿದ್ದು ಹೆಮ್ಮೆಯ ಸಂಗತಿ. ಆದರೆ, ಮಹಾಧಿವೇಶನದಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವ ಕೆಲಸ ಆಗಲಿಲ್ಲ.

ಸಮಾವೇಶದಲ್ಲಿ ಎಲ್ಲರ ತೊಡಗಿಸಿಕೊಳ್ಳದ್ದರಿಂದ ವಿಫಲ: ಮಾಜಿ ಶಾಸಕ ಎಚ್ಚೆಸ್ ಶಿವಶಂಕರ್ ಬೇಸರ

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಮಹಾಧಿವೇಶನ ಸಮಾಜದ ಶಕ್ತಿ ಪ್ರದರ್ಶನವಾಗದೇ, ಕೆಲವರ ವೈಭ‍ವೀಕರಣಕ್ಕೆ ಸೀಮಿತವಾದ್ದರಿಂದ ವಿಫಲವಾಗಿದೆ ಎಂದು ಹರಿಹರದ ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಒಳ ಪಂಗಡಗಳ ಒಳಗೊಂಡು ವೀರಶೈವ ಸಮಾಜವಾಗುತ್ತದೆಂಬುದನ್ನು ಯಾರೂ ಮರೆಯಬಾರದು. 93 ವರ್ಷದ ಹಿರಿಯರಾದ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಹಾಧಿವೇಶನ ನಡೆಸಿದ್ದು ಹೆಮ್ಮೆಯ ಸಂಗತಿ. ಆದರೆ, ಮಹಾಧಿವೇಶನದಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವ ಕೆಲಸ ಆಗಲಿಲ್ಲ. ಸಮಾಜದ ಸಾವಿರಾರು ಸ್ವಾಮೀಜಿಗಳಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಕನಿಷ್ಟ 25 ಲಕ್ಷ ಜನರ ಸೇರಿಸಿ, ಅದ್ಭುತ ಶಕ್ತಿ ಪ್ರದರ್ಶನ ಮಾಡಬಹುದಿತ್ತು.ಆದರೆ ಅಂತಹ ಕೆಲಸಕ್ಕೆ ಬಾರದ ಪ್ರದರ್ಶನವಾಗಿದೆಯಷ್ಟೇ ಎಂದು ಟೀಕಿಸಿದರು.

ಮಹಾಧಿವೇಶನ ಪಕ್ಷದ ಕಾರ್ಯಕ್ರಮವಲ್ಲ:

ಬೆಂಗಳೂರು, ಬೆಳಗಾವಿಯಲ್ಲಿ ಕೇವಲ ಒಂದು ಒಳ ಪಂಗಡವಾದ ಪಂಚಮಸಾಲಿ ಸಮಾಜ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿಸಿದ್ದೆವು. ಮಹಾಸಭಾದ ಮಹಾಧಿವೇಶನವೆಂದರೆ ಒಂದು ಪಕ್ಷದ ಕಾರ್ಯಕ್ರಮ ಅಲ್ಲ. ಇಡೀ ಸಮಾಜದ ಕಾರ್ಯಕ್ರಮವಾದ್ದರಿಂದ ಎಲ್ಲರನ್ನೂ ತೊಡಗಿಸಿಕೊಳ್ಳಬೇಕಿತ್ತು. ಆಯೋಜಕರಿಗೆ ಇದರ ಅರಿವು ಇರಬೇಕಿತ್ತು. ಸಮಾರಂಭ ಸ್ಥಳದ ಸುತ್ತಮುತ್ತ 3-4 ರಸ್ತೆಗಳಲ್ಲಿ ಹಾಕಿದ್ದ ಫ್ಲೆಕ್ಸ್ ಗೆ ಮಾತ್ರ ಅಧಿವೇಶನ ಸೀಮಿತವಾಗಿತ್ತು. ಬೆಣ್ಣೆದೋಸೆ, ತಿಂಡಿ ತಿನ್ನುವುದಕ್ಕೂ ಜನರು ಬರದಿದ್ದನ್ನು ಕೇಳಿ ಬೇಸರವಾಯಿತು ಎಂದು ಹೇಳಿದರು.

ಫೆಬ್ರವರಿಯಲ್ಲಿ ಒಳ ಪಂಗಡಗಳ ಸಮಾವೇಶ:

ಕೂಡಲ ಸಂಗಮದಲ್ಲಿ ಜ.14ರಂದು ಸಭೆ ಸೇರಿ, ಎಲ್ಲಾ ಒಳ ಪಂಗಡಗಲ ಕನಿಷ್ಟ 10 ಲಕ್ಷ ಜನರನ್ನು ಸೇರಿಸಿ, ದಾವಣಗೆರೆಯಲ್ಲೇ ಶಕ್ತಿ ಪ್ರದರ್ಶನ ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಫೆಬ್ರವರಿ ಅಂತ್ಯಕ್ಕೆ ಒಳ ಪಂಗಡಗಳ ಸಮಾವೇಶ ನಡೆಸುವುದಂತೂ ಖಚಿತ. ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲೇ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳಿಗೂ 2 ಎ ಮತ್ತು ಕೇಂದ್ರದ ಒಬಿಸಿ ಮೀಸಲಾತಿಗೆ ಒತ್ತಾಯಿಸುತ್ತೇವೆ. ಹರಿಹರದ ಪೀಠದ ಸ್ವಾಮೀಜಿಯವರ ಕೂಡ ಅಂದಿನ ಸಮಾವೇಶಕ್ಕೆ ಆಹ್ವಾನಿಸುತ್ತೇವೆ. ಸಮಾವೇಶಕ್ಕೆ ಬರುವುದು, ಬಿಡುವುದು ಸ್ವಾಮೀಜಿಗೆ ಬಿಟ್ಟದ್ದು ಎಂದು ಎಚ್.ಎಸ್.ಶಿವಶಂಕರ್ ತಿಳಿಸಿದರು.

ಮಹಾಧಿವೇಶನಕ್ಕೆ ನನ್ನ ವೈಯಕ್ತಿಕವಾಗಿ ಕರೆದಿಲ್ಲ

ಮಹಾಧಿವೇಶನದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಯಾಕೆ ಹಾಕಿದ್ದರೋ ಗೊತ್ತಿಲ್ಲ. ಯಾರೋ ಬಂದು, ಮನೆಯ ಗೇಟ್ ಒಳಗಡೆ ಆಹ್ವಾನ ಪತ್ರ ಬಿಸಾಡಿ ಹೋಗಿದ್ದರು. ನನಗೆ ಯಾರೂ ವೈಯಕ್ತಿಕವಾಗಿ ಮಹಾಧಿವೇಶನಕ್ಕೆ ಕರೆದಿಲ್ಲ. ನಾನು ಕೂಡ ವೀರಶೈವ ಲಿಂಗಾಯತ ಎಂಬುದು ಮಹಾಸಭಾದವರು ಮರೆತಿರಬೇಕು. 3 ದಶಕದಿಂದ ರಾಜಕೀಯ ಅನುಭವವಿರುವ ನಾನು ಮಾಡಿದಷ್ಟು ಧಾರ್ಮಿಕ ಕಾರ್ಯಕ್ರಮ ಯಾರೂ ಮಾಡಿಲ್ಲ. ನನ್ನಂತೆ ರಾಜ್ಯಾದ್ಯಂತ ಇನ್ನೂ ಅನೇಕ ಮುಖಂಡರಿದ್ದರೂ, ಅಂತಹವರನ್ನೆಲ್ಲಾ ಬಳಸಿಕೊಳ್ಳದ ಕಾರಣಕ್ಕೆ ಮಹಾಧಿವೇಶನ ವಿಫಲವಾಗಿದೆ ಎಂದು ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್ ಬೇಸರ ಹೊರ ಹಾಕಿದರು.