ಮಹಾದ್ವಾರ, ಪುತ್ಥಳಿ ತೆರವು: ಭಾನುವಳ್ಳಿಯಲ್ಲಿ ನಿಷೇಧಾಜ್ಞೆ

| Published : Mar 12 2024, 02:01 AM IST

ಮಹಾದ್ವಾರ, ಪುತ್ಥಳಿ ತೆರವು: ಭಾನುವಳ್ಳಿಯಲ್ಲಿ ನಿಷೇಧಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಕ ಸಮಾಜದ ಮದಕರಿ ನಾಯಕ ಮಹಾದ್ವಾರ, ವೃತ್ತದ ನಾಮಫಲಕ ಹಾಗೂ ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದವು. ಈ ವಿಚಾರದಿಂದಾಗಿ ಆಡಳಿತ ಯಂತ್ರಕ್ಕೂ ಇದು ತಲೆ ನೋವು ತಂದಿಟ್ಟಿತ್ತು. ಇಡೀ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ, ನಾಮಫಲಕ ತೆರವು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು/ ದಾವಣಗೆರೆ

ಮದಕರಿ ನಾಯಕರ ಮಹಾದ್ವಾರ (ಕಮಾನು), ಅನಧಿಕೃತ ನಾಮಫಲಕ, ಪುತ್ಥಳಿ ಜಿಲ್ಲಾಡಳಿತದ ಸೂಚನೆಯಂತೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ನೇತೃತ್ವದಲ್ಲಿ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಿ, ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯರೂ ಸೇರಿ 30 ಜನರ ವಶಕ್ಕೆ ಪಡೆದರು.

ಭಾನುವಳ್ಳಿ ಗ್ರಾಮದಲ್ಲಿ ಎರಡೂವರೆ ದಶಕದಿಂದ ಅಧಿಕೃತವಾಗಿದ್ದ ಮದಕರಿ ನಾಯಕ ದ್ವಾರ ಬಾಗಿಲನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆಯು ತೆರವುಗೊಳಿಸಿದ್ದ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ 30 ಜನರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೆ ದಿವಂಗತ ಎಚ್.ಶಿವಪ್ಪ ಸಚಿವರಿದ್ದಾಗ 18.4.1999ರಲ್ಲಿ ಸ್ಥಳೀಯ ಸಂಸ್ಥೆ ಅನುಮತಿ ಪಡೆದು, ಅಧಿಕೃತವಾಗಿಯೇ ಶ್ರೀ ಮದಕರಿ ನಾಯಕ ಮಹಾದ್ವಾರ ನಿರ್ಮಿಸಿ, ರಾಜನಹಳ್ಳಿ ‍ಶ್ರೀ ವಾಲ್ಮೀಕಿ ಗುರುಪೀಠದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಗಿತ್ತು. ಈಗ ಅದನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದರಿಂದ ಗ್ರಾಮದ ಪರಿಶಿಷ್ಟ ಪಂಗಡದ ಮುಖಂಡರು, ಮಹಿಳೆಯರು, ಸಮಾಜದವರು ಪ್ರತಿಭಟನೆಗೆ ಮುಂದಾಗಿದ್ದರಿಂದ ಪೊಲೀಸರು ಬಂಧಿಸಿದರು ಎನ್ನಲಾಗಿದೆ.

ನಾಯಕ ಸಮಾಜದ ಮದಕರಿ ನಾಯಕ ಮಹಾದ್ವಾರ, ವೃತ್ತದ ನಾಮಫಲಕ ಹಾಗೂ ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದವು. ಈ ವಿಚಾರದಿಂದಾಗಿ ಆಡಳಿತ ಯಂತ್ರಕ್ಕೂ ಇದು ತಲೆ ನೋವು ತಂದಿಟ್ಟಿತ್ತು. ಇಡೀ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ, ನಾಮಫಲಕ ತೆರವು ಮಾಡಲಾಯಿತು. ಮುಂಜಾಗ್ರತೆಯಾಗಿ ಪೊಲೀಸರು ವಾಲ್ಮೀಕಿ ಸಮುದಾಯದ ಸುಮಾರು 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಮಹಾದ್ವಾರ, ಫಲಕ ತೆರವು ವಿರೋಧಿಸಿ ವಾಲ್ಮೀಕಿ ಸಮುದಾಯದ ಮಹಿಳೆಯರು ಮಲೆಬೆನ್ನೂರು ಪೊಲೀಸ್ ಠಾಣೆ ಬಳಿ ಜಮಾಯಿಸಿ, ಸರ್ಕಾರ ಮತ್ತು ಗ್ರಾಮದಲ್ಲಿ ತಮ್ಮ ಸಮುದಾಯದವರ ಮೇಲೆ ದೌರ್ಜನ್ಯ ನಡೆಸುತ್ತಿರುವ ಮತ್ತೊಂದು ಸಮಾಜದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ, ಮದಕರಿ ನಾಯಕರ ಮಹಾದ್ವಾರ, ಪುತ್ಥಳಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ತಮ್ಮ ಸಮಾಜದಿಂದ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ವಾಲ್ಮೀಕಿ ಸಮಾಜದ ಮುಖಂಡರಾದ ಗ್ರಾಪಂ ಸದಸ್ಯ ಧನ್ಯಕುಮಾರ, ಮಹೇಶ್ವರಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.

ಕನಕದಾಸರ ಮೂರ್ತಿ ಉಳಿಸಿ, ಉಳಿದ ನಾಮಫಲಕ ಮತ್ತು ಮಹಾದ್ವಾರ ತೆಗೆದಿದ್ದಾರೆ. ಅಧಿಕಾರಿಗಳು ಒಂದು ಸಮುದಾಯದ ಪ್ರತಿನಿಧಿಗಳಂತೆ ಕೆಲಸ ಮಾಡದೇ, ನ್ಯಾಯದ ಪರ ಇರಬೇಕು. ತಕ್ಷಣವೇ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ಅಮಾನತುಪಡಿಸಬೇಕು ಎಂದು ಗ್ರಾಮದ ವಾಲ್ಮೀಕಿ ಹಾಗೂ ಗಂಗಾಮತ ಸಮುದಾಯದ ಮುಖಂಡರಾದ ಮಂಜಪ್ಪ, ಕಂಪನಿ ಹನುಮಂತಪ್ಪ, ಮಾರುತಿ ಇತರರು ಒತ್ತಾಯಿಸಿದರು. ಮಲೆಬೆನ್ನೂರು ಠಾಣೆಯ ಬಳಿ ವಾಲ್ಮೀಕಿ ಪೀಠದ ಟ್ರಸ್ಟ್ ಪದಾಧಿಕಾರಿಗಳು, ಸಮಾಜದ ವಕೀಲರು, ಮುಖಂಡರು ಧಾವಿಸಿ, ಜಿಲ್ಲಾಡಳಿತ, ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ತಹಸೀಲ್ದಾರ್ ಗುರು ಬಸವರಾಜ, ಡಿವೈಎಸ್ಪಿ ವಿಜಯಕುಮಾರ ಸಂತೋಷ್, ಡಿವೈಎಸ್‌ಪಿ ಪ್ರಶಾಂತ್ ಸಿದ್ದನಗೌಡ, ಸಿಪಿಐ ಸುರೇಶ್ ಸಗರಿ, ಇಒ ರಮೇಶ್ ಸುಲ್ಪಿ, ಮಲೇಬೆನ್ನೂರು ಪಿಎಸ್‌ಐ ಪ್ರಭು, ಭೇಟಿ ನೀಡಿ ಉಭಯ ಕಡೆಯವರ ಮನವಿ ಸ್ವೀಕರಿಸಿ, ಜಿಲ್ಲಾಡಳಿತಕ್ಕೆ ಕಳಿಸಿಕೊಡುವ ಭರವಸೆ ನೀಡಿದರು. ನಾಯಕ ಸಮಾಜದ ಮುಖಂಡರಾದ ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಮುಖಂಡ ಆನಂದಪ್ಪ, ರಂಗಪ್ಪ, ವಕೀಲ ನೀಲಾನಹಳ್ಳಿ ಎನ್.ಎಂ.ಆಂಜನೇಯ ಗುರೂಜಿ ಸೇರಿ ಅನೇಕರಿದ್ದರು. 15ರವರೆಗೆ ಗ್ರಾಮದಲ್ಲಿ ನಿಷೇಧಾಜ್ಞೆ

ಸತ್ಯಶೋಧನಾ ಸಮಿತಿಯಲ್ಲಿ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅಧ್ಯಕ್ಷರಾಗಿದ್ದು, ಗ್ರಾಮದಲ್ಲಿ ಸುಮಾರು 25 ಅನಧಿಕೃತ ಪುತ್ಥಳಿ, ನಾಮಫಲಕ ಇರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಅವುಗಳ ತೆರವಿಗೆ ಸೂಚನೆ ನೀಡಿದ್ದರಿಂದ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮಾ.11ರಿಂದ ಮಾ.15ರವರೆಗೆ ಗ್ರಾಮದಲ್ಲಿ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದ್ದಾರೆ.