ಸಾರಾಂಶ
ಇವತ್ತಿನ ಮಕ್ಕಳು ದೇಶದ ಮುಂದಿನ ಪ್ರಜೆಗಳು. ಈ ನಿಟ್ಟಿನಲ್ಲಿ ಸ್ವಾತಂತ್ರ್ಯವನ್ನು ಆಚರಿಸುವುದು ನಮ್ಮ ಕರ್ತವ್ಯ
ಕನ್ನಡಪ್ರಭ ವಾರ್ತೆ ಮೈಸೂರು
ಸಮೃದ್ಧ ದೇಶವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕು. ಸ್ವಚ್ಛ, ಶ್ರೇಷ್ಠ, ಅಭಿವೃದ್ಧಿಶೀಲ ಮನೋಭೂಮಿಕೆ ನಿಟ್ಟಿನಲ್ಲಿ ಯುವಕರು ಕನಸು ಕಾಣಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾಜನ ವಿದ್ಯಾಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾನು ಭಾರತದ ಯಾವುದೇ ಮೂಲೆಯಲ್ಲಿದ್ದರೂ ಸ್ವಾತಂತ್ರೋತ್ಸವ ದಿನಗಳಲ್ಲಿ ಭಾಗಿಯಾಗುತ್ತೇನೆ. ನಮ್ಮ ಹುಟ್ಟಿನ ಅಸ್ತಿತ್ವಕ್ಕೆ ಕಾರಣವಾದ ಈ ದಿನದಲ್ಲಿ ಭಾಗಿಯಾಗುವುದು ನಮ್ಮ ಭಾಗ್ಯ ಎಂದರು.
ಇವತ್ತಿನ ಮಕ್ಕಳು ದೇಶದ ಮುಂದಿನ ಪ್ರಜೆಗಳು. ಈ ನಿಟ್ಟಿನಲ್ಲಿ ಸ್ವಾತಂತ್ರ್ಯವನ್ನು ಆಚರಿಸುವುದು ನಮ್ಮ ಕರ್ತವ್ಯ. ಇದು ಕೇವಲ ಹಬ್ಬವಲ್ಲ ಕತ್ತಲಿನಿಂದ ಬೆಳಕಿಗೆ ಕಾಲಿಟ್ಟ ದಿನ, ಬ್ರಿಟಿಷರ ದಬ್ಬಾಳಿಕೆಯಿಂದ ಬಿಡಿಸಿಕೊಂಡ ಪುಣ್ಯ ದಿನ. ಇಲ್ಲಿ ಭಿನ್ನ ಸಂಸ್ಕೃತಿ ಪರಂಪರೆಗಳಿವೆ. ಭಾರತವು ಸಂಪದ್ಭರಿತವಾದ ದೇಶವಾಗಿದ್ದು, ಇಂತಹ ಸಮೃದ್ಧ ರಾಷ್ಟ್ರ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿತ್ತು. ಕೊನೆಗೆ ಭಾರತೀಯರ ಆಕ್ರೋಶದ ಕಟ್ಟೆ ಒಡೆದು, ಬ್ರಿಟಿಷರ ವಿರುದ್ಧ ಹೋರಾಡಿ, ಅನೇಕರು ಹುತಾತ್ಮರಾಗಿದ್ದಾರೆ. ಅವರನ್ನೆಲ್ಲ ಇಂದು ಸ್ಮರಿಸಬೇಕಾಗಿದೆ ಎಂದು ಹೇಳಿದರು.ಗಾಂಧೀಜಿಯವರ ಅಹಿಂಸಾ ಹೋರಾಟ ಬ್ರಿಟಿಷರ ನಿದ್ದೆಗೆಡಿಸಿತು. ನಾವು ಭಾರತೀಯರು ಹಿಂಸೆ ಮೂಲಕ ಹೋರಾಟ ಮಾಡಿದ್ದರೆ, ರಕ್ತಚರಿತೆಯಾಗಿ ಉಳಿಯುತ್ತಿತ್ತು. ಆದರೆ, ಭಾರತ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದು, ವಿಶ್ವಕ್ಕೆ ಮಾದರಿಯಾಗಿದೆ. ಇಷ್ಟೆಲ್ಲಾ ಬಲಿದಾನಗಳನ್ನು, ಹೋರಾಟವನ್ನು ಯುವಕರು ಸ್ಮರಿಸಬೇಕಾಗಿದೆ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್, ಆಡಳಿತ ಮಂಡಳಿಯ ಸದಸ್ಯ ಡಾ. ನಾಗಶ್ರೀನಿವಾಸ್, ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಡಾ.ಎಚ್.ಆರ್. ತಿಮ್ಮೇಗೌಡ, ಡಾ.ಎಚ್.ಎನ್. ಭಾಸ್ಕರ್, ಮಹಂತೇಶಪ್ಪ, ಡಾ.ಪಿ.ಜಿ. ಪುಷ್ಪರಾಣಿ, ವಿಷಕಂಠಮೂರ್ತಿ, ಸುಜಾತ, ವಿ. ಗಾಯತ್ರಿ ಮೊದಲಾದವರು ಇದ್ದರು.