ಮಹಾಲಕ್ಷ್ಮೀ’ ಖಾತೆಗಾಗಿ ಮುಗಿಬಿದ್ದ ಮಹಿಳೆಯರು

| Published : May 29 2024, 01:35 AM IST

ಸಾರಾಂಶ

ಮಹಾಲಕ್ಷ್ಮಿ ಖಾತೆ ತೆರೆಯಲು ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಮುಗಿಬಿದ್ದಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿರುವ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರು. ನೀಡುವ ‘ಮಹಾಲಕ್ಷ್ಮೀ’ ಯೋಜನೆ ಜಾರಿಗೆ ಬರಲಿದೆ ಎಂದು ಸಾವಿರಾರು ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ (ಜಿಪಿಓ) ಕಳೆದ ಎರಡು ದಿನಗಳಿಂದ ಬೆಳ್ಳಂ ಬೆಳಗ್ಗೆ ಆಗಮಿಸಿ ಖಾತೆ ತೆರೆಯಲು ಆರಂಭಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಪ್ರತಿ ತಿಂಗಳು ಎಂಟು ಸಾವಿರ ರು. ಖಾತೆಗೆ ಜಮಾ ಆಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಬಿಪಿ) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಖಾತೆ ತೆರೆಯಲು ಮೇ 27 ಕೊನೆಯ ದಿನ ಎಂಬ ವದಂತಿ ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಮೂಲಕ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯ ಹುಟ್ಟುವ ಮುನ್ನವೇ ಜಿಪಿಓ ಕಚೇರಿಗೆ ಬರತೊಡಗಿದ್ದಾರೆ. ಖಾತೆ ತೆರೆಯಲು ತಳ್ಳಾಟ, ನೂಕಾಟ ತಡೆಯಲು ಪೊಲೀಸರ ಸಹಾಯ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಯಾವುದೇ ಯೋಜನೆ ಇಲ್ಲ:

ಎಂಟು ಸಾವಿರ ರು. ಪ್ರೋತ್ಸಾಹ ಧನ ನೀಡುವ ಯಾವುದೇ ಯೋಜನೆ ಜಾರಿ ಇಲ್ಲವೆಂದು ಕಚೇರಿಯ ಹೊರಗಡೆ ಫಲಕ ಹಾಕಲಾಯಿತು. ಜತೆಗೆ ಜಿಪಿಒ ಕಚೇರಿಯ ಸಿಬ್ಬಂದಿ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಎಂಟು ಸಾವಿರ ರು. ಖಾತೆಗೆ ಜಮಾ ಆಗುವ ಯಾವುದೇ ಯೋಜನೆ ಜಾರಿ ಇಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಮಹಿಳೆಯರು ಖಾತೆ ತೆರೆಯುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಜಿಪಿಒ ಕಚೇರಿಯಲ್ಲಿ ಬೇರೆ ಬೇರೆ ಸಿಬ್ಬಂದಿಯನ್ನು ಐಪಿಬಿಪಿ ಖಾತೆ ತೆರೆಯಲು ಬಳಸಿಕೊಳ್ಳಲಾಯಿತು ಎಂದು ಜಿಪಿಓ ಅಧಿಕಾರಿಗಳು ಹೇಳಿದ್ದಾರೆ.

ಟೋಕನ್‌ ವ್ಯವಸ್ಥೆ:

ಸುಲಭವಾಗಿ ಖಾತೆ ತೆರೆಯಲು ಅನುಕೂಲವಾಗುವಂತೆ ಟೋಕನ್‌ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದರು. ಆದರೆ ಕೆಲವರು ಎರಡು ಮೂರು ಟೋಕನ್‌ ಪಡೆದು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಧಾರ ಕಾರ್ಡ್‌ನ ಕೊನೆಯ ಸಂಖ್ಯೆಯನ್ನು ನಮೂದಿಸಿ ಟೋಕನ್‌ ಕೊಡುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು.

ಐಪಿಬಿಪಿ ಖಾತೆಗಳನ್ನು ಯಾವುದೇ ಅಂಚೆ ಕಚೇರಿ ಅಥವಾ ಆನ್‌ಲೈನ್‌ ಮೂಲಕ ತೆರೆಯಬಹುದಾಗಿದೆ. ಅಂಚೆ ಕಚೇರಿ ಸಿಬ್ಬಂದಿ ಖಾತೆದಾರರ ಫಲಾನುಭವಿ ಮನೆಗೆ ಬಂದು ಆಧಾರ್‌ ದೃಢೀಕರಣ ಪಡೆಯಲು ಅವಕಾಶವಿದೆ. ಆದರೂ ಜನರು ಜಿಪಿಒ ಕಚೇರಿಗೆ ಬರತೊಡಗಿದ್ದಾರೆ, ಹೀಗಾಗಿ ಖಾತೆ ತೆರೆಯಲು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ಸಹ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.