ಮಹಾಲಿಂಗಪುರ ಗರ್ಭಪಾತ ಪ್ರಕರಣ ಮರುಕಳಿಸದಿರಲಿ: ಸಿಇಒ ಕುರೇರ್

| Published : Jun 17 2024, 01:31 AM IST

ಸಾರಾಂಶ

ಪ್ರಸವಪೂರ್ವ ಲಿಂಗ ಪತ್ತೆ ಪ್ರಕರಣಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ಮರುಕಳಿಸದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸವಪೂರ್ವ ಲಿಂಗ ಪತ್ತೆಯಿಂದ ಈಚೆಗೆ ಮಹಿಳೆಯೋರ್ವಳು ಮರಣ ಹೊಂದಿರುವ ಪ್ರಕರಣ ನಡೆದಿದ್ದು, ಇಂತಹ ಪ್ರಕರಣಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ಮರುಕಳಿಸದಂತೆ ಕಾರ್ಯನಿರ್ವಹಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತಿ ಹಳೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಜರುಗಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇ ಮಾಹೆಯ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 183 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಇವುಗಳಿಗೆ ನಿಯಮಿತವಾಗಿ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮಾಡಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡು ವಾರದೊಳಗೆ ವರದಿ ನೀಡಬೇಕು, ನಕಲಿ ವೈದ್ಯರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಸುರಕ್ಷಿತ ಹೆರಿಗೆಗಾಗಿ ಜಿಲ್ಲೆಯ 41 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24*7 ಕೇಂದ್ರಗಳನ್ನಾಗಿ ಮಾಡಲಾಗಿದ್ದು, ಇವುಗಳಲ್ಲಿ ವಿಶೇಷವಾಗಿ ಬದಾಮಿ ಮತ್ತು ಬೀಳಗಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಒಂದೂ ಹೆರಿಗೆ ಆಗದೇ ಇರುವುದು ತಾಲೂಕು ಆರೋಗ್ಯ ಅಧಿಕಾರಿಯ ನಿಷ್ಕಾಳಜಿತನ ತೋರಿಸುತ್ತದೆ. ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂದಿಸದೆ, ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ನಿಧಾನಗತಿಯಿಂದ ಕೆಲಸ ಮಾಡಿದಲ್ಲಿ ಅಂತಹ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮರೇಶ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಡೆಂಘೀಯತಹ ಕೀಟಜನ್ಯ ರೋಗಗಳು ಹೆಚ್ಚಳವಾಗದಂತೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಸಾರ್ವಜನಿಕ ತಿಳಿವಳಿಕೆ ಹಾಗೂ ಸಮೀಕ್ಷಾ ಕಾರ್ಯಗಳನ್ನು ಅಭಿಯಾನ ಮಾದರಿಯಲ್ಲಿ ಹಮ್ಮಿಕೊಳ್ಳಬೇಕು. ಜಿಲ್ಲಾ ಅಥವಾ ಗ್ರಾಮ ಮಟ್ಟದ ಯಾವುದೇ ಕಾರ್ಯಕ್ರಮವಾಗಿರಲಿ ಅದು ಜನರಿಗೆ ತಲುಪುವಂತಿರಬೇಕು. ಇದಕ್ಕಾಗಿ ಸೂಕ್ತ ಕ್ರಿಯಾಯೋಜನೆ ರೂಪಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.

-ಶಶಿಧರ ಕುರೇರ್ ಜಿಪಂ ಸಿಇಒ