ಸಾರಾಂಶ
ಬರುವ 2025ರ ಜನವರಿ ಕೊನೆಯ ವಾರದಲ್ಲಿ ನವತೀರ್ಥಂಕರರ ಮಹಾ ಮಸ್ತಕಾಭಿಷೇಕ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬರುವ 2025ರ ಜನವರಿ ಕೊನೆಯ ವಾರದಲ್ಲಿ ನವತೀರ್ಥಂಕರರ ಮಹಾ ಮಸ್ತಕಾಭಿಷೇಕ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಸಿದ್ಧತಾ ಕಾರ್ಯಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.ಅವರು ಇಲ್ಲಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಭಾನುವಾರ ನವತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ, ನವನಿರ್ಮಿತ ಸುಮೇರು ಪರ್ವತ ಲೋಕಾರ್ಪಣೆ, ಜಿನಬಿಂಬ ಪಂಚಕಲ್ಯಾಣ ಮಹೋತ್ಸವ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ರೂಪುರೇಷೆ, ಜಿನಬಿಂಬ ಪಂಚಕಲ್ಯಾಣ, ಜನಪಯೋಗಿ ಕಾರ್ಯ, ಮಹಿಳಾ ಸಬಲೀಕರಣ, ಜೈನ ಕಮಿಟಿ ನಿಯೋಜನೆ, ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಯಿತು.ಇದೇ ವೇಳೆ ಪಂಚಕಲ್ಯಾಣ ಮಹೋತ್ಸವದ ಅಧ್ಯಕ್ಷರನ್ನಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಚಿವ ಡಿ. ಸುಧಾಕರ ಹಾಗೂ 16 ಜನ ಜೈನ ಭಟ್ಟಾರಕರನ್ನು ಗೌರವ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಯಿತು.
ಈ ವೇಳೆ ಸಚಿವ ಡಿ. ಸುಧಾಕರ ಮಾತನಾಡಿ, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಲು ಸಮಾಜ ಬಾಂಧವರು ನಿರ್ಧರಿಸಿದ್ದು, ಇದಕ್ಕೆ ಬೇಕಾದ ಅಗತ್ಯ ಸಹಾಯ, ಸಹಕಾರ ನೀಡಲು ಬದ್ಧನಿರುವುದಾಗಿ ತಿಳಿಸಿದರು.ಎಸ್‌ಡಿಎಂ ವಿವಿ ಉಪ ಕುಲಪತಿ ನಿರಂಜನಕುಮಾರ ಜೈನ್, ಅಖಿಲ ಭಾರತ ತೀರ್ಥ ಕ್ಷೇತ್ರ ಕಮಿಟಿ ಅಧ್ಯಕ್ಷ ಜಂಬುಪ್ರಸಾದ ಜೈನ್, ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಪದ್ಮರಾಜ ದೇಸಾಯಿ, ಶಾಸಕ ಸಂಜಯ ಪಾಟೀಲ, ಜೈನ ಮಠದ ವಿವಿಧ ಭಟ್ಟಾರಕರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.ಪೂರ್ವಭಾವಿ ಸಭೆಯ ಪೂರ್ವದಲ್ಲಿ ಜೈನ ಸಮಾಜದ ಭಟ್ಟಾರಕರನ್ನು ಮೆರವಣಿಗೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ತರಲಾಯಿತು.
ಸಭೆಯಲ್ಲಿ ಕಾರ್ಕಳದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಅಮ್ಮಿನಬಾವಿಯ ಧಮಸೇನ ಭಟ್ಟಾರಕ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಪಾಲ್ಗೊಂಡಿದ್ದರು.