ವೀರಶೈವ ಲಿಂಗಾಯತ ಧರ್ಮ ಒಡೆಯಲು ಬಿಡಲ್ಲ

| Published : Jul 15 2024, 01:55 AM IST

ಸಾರಾಂಶ

ವೀರಶೈವ ಲಿಂಗಾಯತ ಧರ್ಮವನ್ನು ಯಾವುದೇ ಕಾರಣಕ್ಕೂ ಒಡೆಯಲು ಬಿಡುವುದಿಲ್ಲ ಎಂದು ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ವೀರಶೈವ ಲಿಂಗಾಯತ ಧರ್ಮವನ್ನು ಯಾವುದೇ ಕಾರಣಕ್ಕೂ ಒಡೆಯಲು ಬಿಡುವುದಿಲ್ಲ ಎಂದು ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ನಿಟ್ಟೂರಿನ ಶ್ರೀ ಗುಹೇಶ್ವರ ಸ್ವಾಮಿ ನೂತನ ದೇವಸ್ಥಾನದ ರಜತ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ನೂತನ ಉತ್ಸವ ಮೂರ್ತಿ ಹಾಗೂ ರಂಭಾಪುರಿ ಜಗದ್ಗುರುಗಳ ಉತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ರೇಣುಕಾಚಾರ್ಯ, ಬಸವೇಶ್ವರರು ವೀರಶೈವ ಲಿಂಗಾಯತ ಧರ್ಮವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ವೀರಶೈವ ಲಿಂಗಾಯಿತ ಧರ್ಮವನ್ನು ಯಾವುದೇ ಕಾರಣಕ್ಕೂ ರಾಜಕೀಯ ಪಿತೂರಿಯಿಂದ ಹೊಡೆಯಲು ಸಾಧ್ಯವಿಲ್ಲ. ಇದಕ್ಕೆ ವೀರಶೈವ ಪಂಚಪೀಠ ಮಠಗಳು ಯಾವುದೇ ಆಸ್ಪದ ನೀಡುವುದಿಲ್ಲ. ಕಳೆದ ಬಿಜೆಪಿ ಸರಕಾರವು 9ನೇ ತರಗತಿಯ ಪಾಠದಲ್ಲಿ ಲಿಂಗಾಯತ ಸಂಸ್ಥಾಪಕರ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದು, ಇದನ್ನು ಸರಿಪಡಿಸುವಂತಹ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಕಾನೂನು ಹೋರಾಟಕ್ಕೆ ಸಿದ್ಧವಿದ್ದೇವೆ ಎಂದರು.

ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆಯನ್ನು ಮಾಡಿದ್ದು ರೇಣುಕಾಚಾರ್ಯರು ಅದನ್ನು ಬಲಿಷ್ಠವಾಗಿ 12ನೇ ಶತಮಾನದಲ್ಲಿ ಉನ್ನತ ಶಿಖರಕ್ಕೆ ತೆಗೆದುಕೊಂಡು ಹೋದವರು ಜಗಜ್ಯೋತಿ ಬಸವೇಶ್ವರರು. ಸಾಮಾಜಿಕ ಕಲ್ಯಾಣ ಕಾಯಕವೇ ಕೈಲಾಸ ಎಂದು ಬದುಕಬೇಕು. ಕಾಯಕದಿಂದ ಮನುಷ್ಯನಿಗೆ ಚೈತನ್ಯ ಬರುತ್ತದೆ ಎಂದು ತಿಳಿಸಿದರು.

ಸಿದ್ದರಬೆಟ್ಟದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ದೇಶದ ಮೇಲೆ ಸಾಕಷ್ಟು ಬಾರಿ ವಿದೇಶದ ಆಕ್ರಮಣ ನಡೆದಿದ್ದರೂ ಸಹ ನಮ್ಮ ದೇಶದ ಸಂಸ್ಕೃತಿ ಸಂಸಾರವನ್ನು ನಾವು ಬಿಟ್ಟಿಲ್ಲ ಎಂದು ತಿಳಿಸಿದರು.

ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮವು 5000 ವರ್ಷದ ಇತಿಹಾಸವನ್ನು ಹೊಂದಿದ್ದು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮದ ನಡುವೆ ಯಾವುದೇ ಕಾರಣಕ್ಕೂ ವೈಶಮ್ಯ ಬೆರೆಸುವಂತಹ ಕೆಲಸವನ್ನು ಯಾರು ಮಾಡಬಾರದು ಎಂದು ತಿಳಿಸಿದರು.

ನೊಣವಿನಕೆರೆ ಮಠದ ಕಿರಿಯ ಶ್ರೀ, ತೆವೆಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಮುಖಂಡರಾದ ಡಿ.ಎಸ್. ಕುಮಾರ್ ಸಿದ್ದಲಿಂಗಸ್ವಾಮಿ, ಎಸ್ ಟಿ. ಸಿದ್ದಲಿಂಗ ಸ್ವಾಮಿ, ಡಾ. ವಿಕಾಸ್, ಅಖಿಲ ಭಾರತ ವೀರಶೈವ ಸಭಾ ಯುವ ಘಟಕ ಅಧ್ಯಕ್ಷ ಶಶಿ ಹುಲಿಕುಂಟೆ ಮಠ, ಸಮಾಜ ಸೇವಕ ರೇಣುಕಾ ಪ್ರಸನ್ನ ಕುಮಾರ್, ಭಾಗ್ಯಜ್ಯೋತಿ ದಕ್ಷಿಣ ಮೂರ್ತಿ, ಪ್ರೇಮ ಲೀಲಾ ಶಾಂತ ಮಲ್ಲಯ್ಯ ದಿವ್ಯ ಮೋಹನ್ ಕಾವ್ಯಶ್ರೀ ಉಮಾ ಮಹೇಶ್ ಸಚಿನ್ ಹಾಜರಿದ್ದರು.