ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮಹಾಂತ ಸ್ವಾಮೀಜಿ ಪ್ರೇರಣೆ: ತಹಸೀಲ್ದಾರ್ ಮಂಜುನಾಥ್

| Published : Aug 04 2024, 01:28 AM IST

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮಹಾಂತ ಸ್ವಾಮೀಜಿ ಪ್ರೇರಣೆ: ತಹಸೀಲ್ದಾರ್ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ೧೯೭೫ ರಿಂದ ಕೈಗೊಂಡ ಮಹಾಂತ ಸ್ವಾಮೀಜಿಗಳು ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಠವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ಮೃತ ಪಟ್ಟ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ಮಹಾಂತ ಸ್ವಾಮೀಜಿ ತರೆಳಿದ್ದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಜನರಲ್ಲಿ ದುಶ್ಚಟಗಳನ್ನೇಲ್ಲಾ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಡಾ.ಮಹಾಂತ ಶಿವಯೋಗಿಗಳು ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು. ಪಟ್ಟಣದ ತಹಸಿಲ್‌ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ತಾಲೂಕು ಆರೋಗ್ಯ ಇಲಾಖೆ ಏರ್ಪಡಿಸಿದ್ದ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವ ಜಾಥಾ ಹಾಗೂ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಮಹಾಂತ ಶಿವಯೋಗಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆ೧. ೧೯೩೦ ರಲ್ಲಿ ಜನಿಸಿದರು. ತಮ್ಮ ೧೦ನೇ ವಯಸ್ಸಿಗೆ ಸವದಿಯ ವಿರಕ್ತಪಠದ ಕಿರಿಯ ಸ್ವಾಮೀಜಿಗಳಾಗಿ ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಪಡೆದರು. ೧೯೭೦ ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾತೇಂಶ್ವರ ಸಂಸ್ಥಾನ ಮಠದ ೧೯ನೇ ಪೀಠಾಧಿಕಾರಿಯಾಗಿ ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪಿಸಿದರು. ಶಾಖಾ ಮಠಗಳಿಗೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿದರು. ಮಠದ ನೂರಾರು ಎಕರೆ ಭೂಮಿಯನ್ನು ಅಯಾ ಗ್ರಾಮಗಳ ರೈತರಿಗೆ ನೀಡಿ ಕೃಷಿ ಮಾಡಿ ಬದುಕಲು ನೀಡಿದ್ದಾರೆ ಎಂದರು.ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ೧೯೭೫ ರಿಂದ ಕೈಗೊಂಡ ಮಹಾಂತ ಸ್ವಾಮೀಜಿಗಳು ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಠವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ಮೃತ ಪಟ್ಟ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ಮಹಾಂತ ಸ್ವಾಮೀಜಿ ತರೆಳಿದ್ದರು. ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದುಃಖಿಸುವುದನ್ನು ಮತ್ತು ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತರು. ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಜೋಳಿಗೆ ಯೋಜನೆ ಆರಂಭಿಸಿದರು. ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾಂತರ ಜನ್ಮ ದಿನವಾದ ಆ.೧ ರಂದು ವ್ಯಸನ ಮುಕ್ತ ದಿನಾವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಬೀದಿ ನಾಟಕ ಪ್ರದರ್ಶನದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ತಾಲೂಕು ಕಚೇರಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಇಲಾಖಾ ಅಧಿಕಾರಿಗಳು ಬಸ್ ನಿಲ್ದಾಣದವರೆಗೂ ಜಾತಾ ನಡೆಸಿದರು. ತಹಸೀಲ್ದಾರ್ ಮಂಜುನಾಥ್, ಗ್ರೇಡ್೨ ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಅಪೂರ್ವ, ಬಿಇಒ ನಟರಾಜು, ಸಿಡಿಪಿಒ ಅಂಬಿಕಾ, ಪಶುಇಲಾಖೆಯ ನಾಗರಾಜು, ಕಂದಾಯ ಇಲಾಖೆಯ ಶಿರಸ್ಥೆದಾರ್ ಮಂಜುನಾಥ್, ವೆಂಕಟೇಶ್, ವೆಂಕಟರಂಗನ್, ಆರ್.ಐ. ಟಿ.ಬಸವರಾಜು, ನಕುಲ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.