ನಾಳೆಯಿಂದ ಗುಡ್ಡದ ಮಹಾಂತೇಶ್ವರ ಜಾತ್ರೆ

| Published : Feb 10 2025, 01:49 AM IST

ಸಾರಾಂಶ

ಅಫಜಲಪುರ ತಾಲೂಕಿನ ಸುಕ್ಷೇತ್ರ ಚಿನ್ಮಯಗಿರಿಯ ಮಹಾಂತ ಗುಡ್ಡದ ಮಹಾಂತಪುರ ಧರ್ಮಕ್ಷೇತ್ರದ ಮಹಾಂತೇಶ್ವರ ಜಾತ್ರಾ ಮಹೋತ್ಸವವು ಫೆ.11ರಿಂದ ಆರಂಭಗೊಳ್ಳುತ್ತದೆ ಎಂದು ಮಠದ ಪೀಠಾಧಿಪತಿ ವೀಹಮಹಾಂತ ಶಿವಾಚಾರ್ಯರು ಹೇಳಿದರು.

ಚವಡಾಪುರ: ಅಫಜಲಪುರ ತಾಲೂಕಿನ ಸುಕ್ಷೇತ್ರ ಚಿನ್ಮಯಗಿರಿಯ ಮಹಾಂತ ಗುಡ್ಡದ ಮಹಾಂತಪುರ ಧರ್ಮಕ್ಷೇತ್ರದ ಮಹಾಂತೇಶ್ವರ ಜಾತ್ರಾ ಮಹೋತ್ಸವವು ಫೆ.11ರಿಂದ ಆರಂಭಗೊಳ್ಳುತ್ತದೆ ಎಂದು ಮಠದ ಪೀಠಾಧಿಪತಿ ವೀಹಮಹಾಂತ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದ ಪದ್ಧತಿಯಂತೆ ಮಠದಲ್ಲಿ ಪೂಜ್ಯರಾದ ಕಾಯಕಯೋಗಿ ಸಿದ್ದರಾಮ ಶಿವಾಚಾರ್ಯರ ಸಾನಿಧ್ಯದಲ್ಲಿ ಮಠದ ವಿಧಿವಿಧಾನಗಳಂತೆ ಜಾತ್ರಾ ಮಹೋತ್ಸವ ಜರುಗುತ್ತದೆ. ಫೆ.11ರಂದು ಬೆಳಿಗ್ಗೆ 6 ಗಂಟೆಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, 8 ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ, 10 ಗಂಟೆಗೆ ಜಾನುವಾರುಗಳ ಜಾತ್ರೆ ಉದ್ಘಾಟನೆ ನಡೆಯಲಿದೆ. 11 ಗಂಟೆಗೆ ಉಚಿತ ಸಾಮೂಹಿಕ ವಿವಾಹ, ಉಡಿ ತುಂಬುವ ಕಾರ್ಯಕ್ರಮ, ಮಹಿಳಾ ಗೋಷ್ಠಿ ಜರುಗಲಿದ್ದು ಸಂಜೆ ಚಿಣಮಗೇರಾದ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವವು ಪಟ್ಟದ ಪುರವಂತರು, ವಾದ್ಯ ವೈಭವಗಳೊಂದಿಗೆ ಮಠಕ್ಕೆ ಆಗಮಿಸಲಿದೆ ಎಂದರು.

ಫೆ.12ರಂದು ಬೆಳಿಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ಶ್ರೀಗಳಿಂದ ರುದ್ರಾಭಿಷೇಕ, 8 ಗಂಟೆಗೆ ಲಿಂಗಧೀಕ್ಷೆ, ಅಯ್ಯಾಚಾರ, 10 ಗಂಟೆಗೆ ದಾಸೋಹ ಭವನ ಉದ್ಘಾಟನೆ, ಸಂಜೆ 4 ಗಂಟೆಗೆ ಸಂಗೀತ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಯಂಕಾಲ 6 ಗಂಟೆಗೆ ಭವ್ಯ ರಥೋತ್ಸವ, ರಾತ್ರಿ 8 ಗಂಟೆಗೆ ಧರ್ಮಸಭೆ ನಂತರ ಮಹಾಂತ ಬಳಗ ರಾಷ್ಟ್ರ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿಧರಿಂದ ಸಂಗೀತ ಕಾರ್ಯಕ್ರಮ, ಸೊಲ್ಲಾಪುರದ ಭಕ್ತರಿಂದ ನಂದಿಕೋಲ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಬಳಿಕ ಶ್ರೀ ಮಹಾಂತ ಮಡಿವಾಳೇಶ್ವರರ 108 ನಾಮಾವಳಿಗಳ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಜಾತ್ರೆಯ ಪ್ರಯುಕ್ತ ಫೆ.11 ಮತ್ತು 12ರಂದು ಮಹಾಂತ ಜ್ಯೋತಿ ಆಯುರ್ವೇದದ ಚಿಕಿತ್ಸಾ ಶಿಬಿರ, ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಲಿವೆ ಎಂದರು.