ಶಿಕ್ಷಣ ವಂಚಿತರಿಗೆ ಆಶಾದೀಪವಾದ ಮಹಾರಾಜ

| Published : Jun 06 2024, 12:31 AM IST

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ 56 ವರ್ಷ ಬದುಕಿದರೂ ಸಹ ಜನಪರ ಆಡಳಿತ ಮಾಡಿದ್ದಾರೆ. ಆಡಳಿತಾವಧಿಯಲ್ಲಿ ರಾಜತ್ಸವ ಪರಿಕಲ್ಪನೆಯನ್ನು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಐತಿಹಾಸಿಕ ಮಹಾಪುರುಷ ಆಗಿದ್ದಾರೆ ಎಂದು ಲಕ್ಷ್ಮೀಕಾಂತರಾಜೇ ಅರಸು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುನಾಲ್ವಡಿ ಕೃಷ್ಣರಾಜ ಒಡೆಯರ್ 56 ವರ್ಷ ಬದುಕಿದರೂ ಸಹ ಜನಪರ ಆಡಳಿತ ಮಾಡಿದ್ದಾರೆ. ಆಡಳಿತಾವಧಿಯಲ್ಲಿ ರಾಜತ್ಸವ ಪರಿಕಲ್ಪನೆಯನ್ನು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಐತಿಹಾಸಿಕ ಮಹಾಪುರುಷ ಆಗಿದ್ದಾರೆ ಎಂದು ಲಕ್ಷ್ಮೀಕಾಂತರಾಜೇ ಅರಸು ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.ಕೃಷ್ಣರಾಜ ಒಡೆಯರ್‌ ಆಧುನಿಕ ಪರಿಕಲ್ಪನೆಯಲ್ಲಿ ಮೈಸೂರು ರಾಜ್ಯವನ್ನು ಕಟ್ಟಿ ಜನರ ಹೃದಯದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಆಡಳಿತಾವಧಿಯಲ್ಲಿ ಕೃಷಿ ಪದ್ಧತಿಯು ಹಲವಾರು ವಿಭಾಗಗಳಾಗಿ ವಿಂಗಡಣೆಗೊಂಡು ಆ ಮೂಲಕ ಕಂದಾಯವನ್ನು ಸಂಗ್ರಹಿಸಿ ಮೈಸೂರು ಸಂಸ್ಥಾನವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿದರು ಎಂದರು.

ಬ್ರಿಟಿಷ್ ಮಾದರಿಯ ಕಟ್ಟಡಗಳು ನಿರ್ಮಾಣಗೊಂಡವು. ಇಂಗ್ಲಿಷ್ ಭಾಷೆಯ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದು ಹಲವಾರು ಶತಮಾನಗಳಿಂದ ಶಿಕ್ಷಣ ವಂಚಿತರಾಗಿದ್ದವರಿಗೆ ಶಿಕ್ಷಣ ಪಡೆಯುವ ಅನುಕೂಲ ಕಲ್ಪಿಸಿದರು. ಅಲ್ಲದೆ ಮೀಸಲಾತಿ ನೀತಿಯನ್ನು ಜಾರಿಗೆ ತಂದು ಮತ್ತಷ್ಟು ಜನರ ಮೆಚ್ಚುಗೆ ಪಡೆದರು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಕನ್ನಡ ಭಾಷೆಗೆ ಹೆಚ್ಚು ಸ್ಥಾನ ನೀಡಿದರು. ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನ್ನು ಸ್ಥಾಪಿಸಿದರು. ಅದಕ್ಕೆ 1931ರಲ್ಲಿ ಕಟ್ಟಡ ನಿರ್ಮಿಸಲು ಐದು ಸಾವಿರ ರೂ.ಗಳ ದೇಣಿಗೆ ನೀಡಿ ಶ್ರೀ ಕೃಷ್ಣರಾಜ ಪರಿಷತ್‌ ಮಂದಿರ ಕಟ್ಟಲು ಕಾರಣೀಭೂತರಾದರು ಎಂದರು.ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಸಂಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಬೆಂಗಳೂರಿನಲ್ಲಿ ಮೈಸೂರು ಸ್ಯಾಂಡಲ್ ಸೊಪ್ ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣ, ಉಕ್ಕು, ಕಾಗದದ ಕಾರ್ಖಾನೆಗಳನ್ನು ಸ್ಥಾಪಿಸಿದರು ಎಂದು ಹೇಳಿದರು.ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಕರ್ನಾಟಕ ಚರಿತ್ರೆಯಲ್ಲಿಯೇ ದೇಶೀಯ ಸಂಸ್ಥಾನವೊಂದು ನಿರ್ಮಿಸಿದ ಪ್ರಥಮ ಅಣೆಕಟ್ಟೆ ಎಂಬ ಕೀರ್ತಿಗೆ ಪಾತ್ರವಾದ ಹಿರಿಯೂರು ಬಳಿಯ ವಾಣಿವಿಲಾಸ ಸಾಗರ ನಿರ್ಮಿಸುವ ಮೂಲಕ ಆಡಳಿತ ಆರಂಭಿಸಿದರು. ಕನ್ನಡ ಮತ್ತು ಸಂಸ್ಕೃತವೇ ಅಲ್ಲದೆ ಇಂಗ್ಲಿಷ್ ಭಾಷೆಯ ಜ್ಞಾನ ಬೆಳೆಸಿಕೊಂಡಿದ್ದರು. ತಮ್ಮ 12 ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದ ಇವರು ಸಾಂಪ್ರದಾಯಿಕ ಆಡಳಿತಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಮೈಸೂರು ಸಂಸ್ಥಾನವನ್ನು ಆಧುನಿಕ ಮೈಸೂರನ್ನಾಗಿ ಮಾಡಿದ ಇವರು ನಾಲ್ವಡಿ ಭೂಪ ಮನೆ ಮನೆ ದೀಪ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ ಎಂದರು.ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಸಂಚಾಲಕ ಜಿ.ಹೆಚ್.ಮಹದೇವಪ್ಪ, ಕೆ.ಎಸ್.ಉಮಾಮಹೇಶ್, ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ನಟರಾಜ್, ಸತೀಶ್ ಹೆಬ್ಬಾಕ, ಡಾ. ಬಿ.ನಂಜುಂಡಸ್ವಾಮಿ, ರಾಣಿ ಚಂದ್ರಶೇಖರ್, ರಮೇಶ್ ಭಾಗವಹಿಸಿದ್ದರು.