ಸಾರಾಂಶ
- ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಡಿ. ಸುಂದರಿ ಫೋಟೋ- 10ಎಂವೈಎಸ್47
----ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕದಲ್ಲಿ ಹುಟ್ಟಿದ ವಚನ ಚಳವಳಿ ಇಡೀ ಪ್ರಪಂಚಕ್ಕೆ ಬೆಳಕು ನೀಡಿದ್ದು ವಿಶೇಷ. ಮನುಷ್ಯ ಮನುಷ್ಯನಾಗಿ, ಮನುಷ್ಯರನ್ನು ಮನುಷ್ಯರಾಗಿ ಕಾಣಬೇಕೆಂಬ ಸಾರವನ್ನು ಸಾರಲು ಹುಟ್ಟಿದ್ದು ವಚನ ಸಾಹಿತ್ಯ. ಸಮ ಸಮಾಜದ ನಿರ್ಮಾಣಕ್ಕೆ ಬಸವಣ್ಣ ಚಿಂತನೆಗಳು ಅತ್ಯವಶ್ಯಕ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಡಿ. ಸುಂದರಿ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿರುವುದು ಸತ್ಯ. ಅವರ ಕಾಯಕ ಸಿದ್ಧಾಂತ ಮತ್ತು ದಾಸೋಹ ಇಂದಿಗೆ ಹೆಚ್ಚು ಪ್ರಸ್ತುತ ಎಂದರು.
ಗುಣಕ್ಕಿಂತ ಹಣ ಮುಖ್ಯವಾಗಿರುವ ಈ ಕಾಲಘಟ್ಟದಲ್ಲಿ, ಕೊಳ್ಳೆ ಹೊಡೆದಾದರೂ ಸಂಪತ್ತು ಗಳಿಸಬೇಕೆಂಬ ಮನಸ್ಥಿತಿ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ ಪಾಪಿಯ ಧನ ಪ್ರಾಯಶ್ಚಿತಕ್ಕಲ್ಲದೆ ಸತ್ಕಾರಕ್ಕೆ ಸಲ್ಲದಯ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.ಬಸವಣ್ಣನವರ ಮೌಢ್ಯ ವಿರೋಧಿ ಚಿಂತನೆಗಳು, ಜಾತಿ ವಿರೋಧಿ ಚಿಂತನೆಗಳು, ಸ್ತ್ರೀ ಸಮಾನತೆಯ ನಿಲುವುಗಳು, ಸಮ ಸಮಾಜದ ನಿರ್ಮಾಣಕ್ಕೆ ಅವರು ನೀಡಿದ ಸಂದೇಶಗಳನ್ನು ವಿಸ್ತಾರವಾಗಿ ತಿಳಿಸಿದ ಅವರು, ಜಾತಿಯನ್ನು ವಿರೋಧಿಸಿ ಮನುಷ್ಯರನ್ನು ಮನುಷ್ಯರಾಗಿ ಕಂಡ ಬಸವಣ್ಣನವರ ಹಾದಿಯಲ್ಲಿ ಸಾಗಿ ಸಮ ಸಮಾಜವನ್ನು ಸೃಷ್ಟಿಸಲು ನಮಗೆ ಇಂದಿಗೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್ ಮಾತನಾಡಿ, ಇಂದು ನಮ್ಮ ಸುತ್ತ ನಡೆಯುತ್ತಿರುವ ಕ್ರೌರ್ಯದ ಘಟನೆಗಳನ್ನು ಗಮನಿಸಿದಾಗ ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನದ ಸಾರವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯ ಅರಿವಾಗುತ್ತದೆ. ಹಾಗೆಯೇ ನುಡಿದಂತೆ ನಡೆದ ಬಸವಣ್ಣನವರ ಕ್ರಮವನ್ನು ನಾವು ಅನುಸರಿಸಬೇಕಿದೆ ಎಂದು ಹೇಳಿದರು.ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ನಾಗರತ್ನಮ್ಮ, ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ನಂಜುಂಡಯ್ಯ ಅವರು ಬಸವಣ್ಣನವರ ವಚನಗಳನ್ನು ಹಾಡಿದರು. ವಿದ್ಯಾರ್ಥಿನಿ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಜೇನುಶ್ರೀ ಇದ್ದರು. ವಿದ್ಯಾರ್ಥಿನಿ ಬಿಂದು ಅವಧಾನಿ ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಖಜಾಂಚಿ ಅಶ್ವಿನಿ ವಂದಿಸಿದರು.