ಸತತ ಪ್ರಯತ್ನ ಗುರಿ ಸಾಧನೆಗೆ ಸಹಕಾರಿ

| Published : May 09 2025, 12:32 AM IST

ಸಾರಾಂಶ

ಜೀವನದಲ್ಲಿ ಗುರಿ ಇರಬೇಕು. ಅದಿಲ್ಲದೆ ಬದುಕಿಲ್ಲ. ಆ ಗುರಿ ತಲುಪಲು ಗುರು ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವ್ಯಕ್ತಿ ಸತತ ಪ್ರಯತ್ನ ಮಾಡಿದರೇ ಗುರಿ ಸಾಧನೆಗೆ ಸಹಕಾರಿ ಎಂದು ಅಂತಾರಾಷ್ಟ್ರೀಯ ಖೋಖೋ ಆಟಗಾರ್ತಿ ಬಿ. ಚೈತ್ರಾ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಎನ್ ಸಿಸಿ, ರೇಂಜರ್ಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅವಿರತ ಪ್ರಯತ್ನ ಇಲ್ಲದೆ ಸಾಧನೆ ಅಸಾಧ್ಯ ಎಂದರು.

ಜೀವನದಲ್ಲಿ ಗುರಿ ಇರಬೇಕು. ಅದಿಲ್ಲದೆ ಬದುಕಿಲ್ಲ. ಆ ಗುರಿ ತಲುಪಲು ಗುರು ಇರಬೇಕು. ಗುರು ಇಲ್ಲದೆ ಅದು ಕಷ್ಟ ಸಾಧ್ಯ. ಆದ್ದರಿಂದ, ಪರಿಶ್ರಮ ಇರಬೇಕು. ಇಲ್ಲದೆ ಹೋದರೆ ಯಾವುದೂ ಸಾಧ್ಯವಿಲ್ಲ. ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆಯಿರಿ. ಅದು ಯಶಸ್ಸಿನ ಕಡೆಗಿನ ಹಾದಿಗೆ ಸುಲಭ ಮಾರ್ಗ. ಓದುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಇಲ್ಲವೇ ಕಲೆ ಇಂತಹ ಸಹ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಅವರು ಹೇಳಿದರು.

ಲೇಖಕ ಸಂತೋಷ್ ಚೊಕ್ಕಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು. ಹೆಣ್ಣು ಪ್ರಗತಿ ಸಾಧಿಸಿದರೆ ಇಡೀ ಸಮಾಜವೇ ಅಭಿವೃಧ್ಧಿ ಹೊಂದಿದಂತೆ ಎಂದರು.

ಗಾಯಕ ನಿತಿನ್ ರಾಜಾರಾಂ ಶಾಸ್ತ್ರೀ ಅವರು ತಮ್ಮ ಗಾಯನದ ಮೂಲಕ ರಂಜಿಸಿದರು. ಇಂಗ್ಲಿಷ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ಅವರ ಟಾಕೆಟಿಕ್ ಮ್ಯಾನ್ ಕಾದಂಬರಿಯ ಡಿಕ್ಷನರಿಯನ್ನು ಬಿಡುಗಡೆಗೊಳಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ನೆನಪಿನ ಕಾಣಿಕೆ ಮತ್ತು ಬಹುಮಾನ ವಿತರಿಸಲಾಯಿತು. ರಾಜ್ಯ ಮಟ್ಟದಲ್ಲಿ ಪುರಸ್ಕೃತರಾದ ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಾಹುಕಾರ ಹುಂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್, ನಿರ್ದೇಶಕ ದೊರೆಸ್ವಾಮಿನಾಯಕ, ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಪಿ. ಕೋಮಲ್, ಖಜಾಂಚಿ ಡಾ.ಜಿ.ಎಲ್. ಬಸವರಾಜು, ಎನ್ಎಸ್ಎಸ್ ಅಧಿಕಾರಿಗಳಾದ ಎಚ್.ಜೆ. ಭೀಮೇಶ್, ಎಚ್.ಎಂ. ಲತಾರಾಣಿ, ದೈಹಿಕ ಶಿಕ್ಷಣ ನಿರ್ದೇಶಕಿ ಕೆ.ಆರ್. ಪ್ರತಿಮಾ, ಸಿಟಿಒ ಎಂ. ಮಮತಾ, ರೇಂಜರ್ಸ್ ಅಧಿಕಾರಿ ಮಂಜುಳಾ ಶೇಷಗಿರಿ, ಯುವ ರೆಡ್ ಕ್ರಾಸ್ ಅಧಿಕಾರಿ ಎಂ.ಎಸ್. ಕುಮಾರ್, ಪತ್ರಾಂಕಿತ ವ್ಯವಸ್ಥಾಪಕಿ ಆರ್. ಮೀನಾಕ್ಷಿ, ವಿದ್ಯಾರ್ಥಿ ಸಂಸತ್ ನ ಕಾವ್ಯ ಎಂ. ಕಟ್ಟಿ, ವಿ. ಜೀವಿತಾ, ಎಸ್. ದೀಕ್ಷಿತಾ, ರಕ್ಷಿತಾ, ಭೂಮಿಕಾ, ಬೃಂದಾ, ಶ್ರೀರಕ್ಷಾ, ಲೇಖನಾ ಅರಸ್, ದಿವ್ಯಶ್ರೀ, ಅಮೃತಾ, ಲಕ್ಷ್ಮೀ, ಕಾವೇರಿ ಇದ್ದರು.