ಆಫ್ರಿಕಾದ ಗಬಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 21 ಹಕ್ಕಿಪಿಕ್ಕಿಗಳು - ನಕಲಿ ವೀಸಾ ಪಡೆದ ಆರೋಪದಡಿ ಬಂಧನ

| N/A | Published : Mar 24 2025, 10:38 AM IST

Uncontacted tribes: Meet the last free people on Earth
ಆಫ್ರಿಕಾದ ಗಬಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 21 ಹಕ್ಕಿಪಿಕ್ಕಿಗಳು - ನಕಲಿ ವೀಸಾ ಪಡೆದ ಆರೋಪದಡಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಆಯುರ್ವೇದ ಔಷಧಿ, ತೈಲ ವ್ಯಾಪಾರಕ್ಕೆಂದು ಪಶ್ಚಿಮ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿದ್ದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ 21 ಮಂದಿಯನ್ನು ನಕಲಿ ವೀಸಾ ಆರೋಪದಡಿ ಬಂಧಿಸಲಾಗಿದೆ.

 ದಾವಣಗೆರೆ/ಶಿವಮೊಗ್ಗ : ಆಯುರ್ವೇದ ಔಷಧಿ, ತೈಲ ವ್ಯಾಪಾರಕ್ಕೆಂದು ಪಶ್ಚಿಮ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿದ್ದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ 21 ಮಂದಿಯನ್ನು ನಕಲಿ ವೀಸಾ ಆರೋಪದಡಿ ಬಂಧಿಸಲಾಗಿದೆ. ಈ ಪೈಕಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗೋಪನಾಳ, ಅಸ್ತಾಫನಹಳ್ಳಿಯ 9 ಹಾಗೂ ಶಿವಮೊಗ್ಗದ ಹಕ್ಕಿಪಿಕ್ಕಿ ಕಾಲೋನಿಯ 12 ಜನರು ಸೇರಿದ್ದಾರೆ. ಇವರಲ್ಲಿ 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳೆಯರು ಸೇರಿದ್ದಾರೆ.

ಇವರೆಲ್ಲಾ ಗಬಾನ್‌ನ ರಾಜಧಾನಿ ಲಿಬ್ರೆವಿಲ್‌ನಲ್ಲಿ ನೆಲೆಸಿದ್ದಾರೆ. ಗಬಾನ್‌ನಲ್ಲಿ 2023ರಲ್ಲಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ದೇಶ ತೊರೆಯುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಲಿಬ್ರೆವಿಲ್‌ನ ಪೊಲೀಸರು ಇವರ ನಿವಾಸಗಳು, ವ್ಯಾಪಾರಿ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ, ಹಕ್ಕಿಪಿಕ್ಕಿ ಸಮುದಾಯದ ಜನರು ತಮ್ಮ ವ್ಯಾಪಾರಕ್ಕಾಗಿ ಉಪಯೋಗಿಸುತ್ತಿದ್ದ ವೀಸಾಗಳು ನಕಲಿ ಎಂದು ಆರೋಪಿಸಿ, ಅವರನ್ನು ಬಂಧಿಸಿದ್ದಾರೆ. ತಮಗೆ ವೀಸಾ ನೀಡಿದ ಏಜೆಂಟ್‌, ವೀಸಾ ನವೀಕರಣ ವೇಳೆ ಸರ್ಕಾರಕ್ಕೆ ಅಗತ್ಯ ಹಣ ಪಾವತಿಸದೆ ನಕಲಿ ವ್ಯಾಪಾರಿ ವೀಸಾ ಒದಗಿಸಿದ್ದಾನೆ ಎಂದವರು ಆರೋಪಿಸಿದ್ದಾರೆ.

ಈ ಮಧ್ಯೆ, ಆರಂಭದಲ್ಲಿ ಅವರಿಗೆ 2 ಲಕ್ಷ (ಭಾರತೀಯ ಕರೆನ್ಸಿ) ರು. ದಂಡ ವಿಧಿಸಲಾಗಿದ್ದರೂ, ಬಳಿಕ, ತಲಾ 57000 ರು.ದಂಡ ಪಾವತಿಸಿ ದೇಶ ತೊರೆಯಲು ಅನುವು ಮಾಡಿಕೊಡಲಾಗಿದೆ. ಈ ಸಂಬಂಧ ಅವರು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಅಗತ್ಯ ನೆರವಿನ ಭರವಸೆ ದೊರೆತಿದೆ. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಅಗತ್ಯವಿರುವ ಹಣ ಕಳುಹಿಸಿಕೊಡಲು ವ್ಯವಸ್ಥೆ ಮಾಡುತ್ತಿದ್ದು, ಮುಂದಿನ ಶನಿವಾರ ಅವರೆಲ್ಲಾ ಊರಿಗೆ ವಾಪಸ್ಸಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.