ಬೆಳಗಾವಿಯಲ್ಲಿ ಮರಾಠಿಗರಿಗೆ ''''''''ಮಹಾ''''''''ಸರ್ಕಾರದಿಂದ ವೈದ್ಯಕೀಯ ನೆರವು

| Published : Jan 10 2024, 01:45 AM IST

ಬೆಳಗಾವಿಯಲ್ಲಿ ಮರಾಠಿಗರಿಗೆ ''''''''ಮಹಾ''''''''ಸರ್ಕಾರದಿಂದ ವೈದ್ಯಕೀಯ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರ ಸರ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮರಾಠಿ ಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಇದೀಗ ಸದ್ದಿಲ್ಲದೆ ವೈದ್ಯಕೀಯ ನೆರವು ನೀಡಲು ಮುಂದಾಗಿದೆ. ಖಾನಾಪುರ ತಾಲೂಕಿನ ಎಂಇಎಸ್‌ ಕಾರ್ಯಕರ್ತೆಯೊಬ್ಬರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಆರೋಗ್ಯ ಪರಿಹಾರ ನಿಧಿಯಡಿ 1 ಲಕ್ಷ ರು. ಅನ್ನು ಈಗಾಗಲೇ ಮಂಜೂರು ಮಾಡಿದ್ದಾರೆ.

- ಎಂಇಎಸ್‌ ಕಾರ್‍ಯಕರ್ತೆಯೊಬ್ಬರಿಗೆ ಹಣಕಾಸು ನೆರವು

- 1 ಲಕ್ಷ ಚಿಕಿತ್ಸಾ ವೆಚ್ಚ ಭರಿಸಿದ ಮಹಾರಾಷ್ಟ್ರ ಸರ್ಕಾರ

- ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಾವತಿಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರ ಸರ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮರಾಠಿ ಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಇದೀಗ ಸದ್ದಿಲ್ಲದೆ ವೈದ್ಯಕೀಯ ನೆರವು ನೀಡಲು ಮುಂದಾಗಿದೆ. ಖಾನಾಪುರ ತಾಲೂಕಿನ ಎಂಇಎಸ್‌ ಕಾರ್ಯಕರ್ತೆಯೊಬ್ಬರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಆರೋಗ್ಯ ಪರಿಹಾರ ನಿಧಿಯಡಿ 1 ಲಕ್ಷ ರು. ಅನ್ನು ಈಗಾಗಲೇ ಮಂಜೂರು ಮಾಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ತಿಕ್ಕಾಟ ಮುಂದುವರಿದಿರುವ ನಡುವೆಯೇ ಮಹಾರಾಷ್ಟ್ರ ಸರ್ಕಾರದ ಈ ನಡೆ ಅಚ್ಚರಿ ಮೂಡಿಸಿದೆ.

ಗಡಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಬೆಳಗಾವಿಯಲ್ಲಿ ಮರಾಠಿ ಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವಿಮೆ ಯೋಜನೆಗೆ ಅರ್ಜಿ ಸ್ವೀಕಾರ ಕಾರ್ಯವನ್ನೂ ಆರಂಭಿಸಿದೆ. ಅದರಂತೆ ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಐದು ಕಡೆ ಅರ್ಜಿ ಸ್ವೀಕಾರ ಕೇಂದ್ರವನ್ನೂ ಆರಂಭಿಸಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಶಿಫಾರಸು ಪತ್ರದೊಂದಿಗೆ ಈ ಅರ್ಜಿ ಸ್ವೀಕರಿಸಲಾಗುತ್ತಿದೆ. ಬೆಳಗಾವಿ, ಕಾರವಾರ, ಬೀದರ್‌, ಕಲಬುರಗಿ ಜಿಲ್ಲೆ ಸೇರಿ ಗಡಿ ಭಾಗದ 865 ಮರಾಠಿ ಭಾಷಿಕ ಪ್ರದೇಶದಲ್ಲಿ ಯೋಜನೆ ಜಾರಿಯಾಗಲಿದೆ.

ಇದರ ನಡುವೆಯೇ ವೈದ್ಯಕೀಯ ನೆರವಿನ ಅಗತ್ಯವಿರುವ ಕರ್ನಾಟಕದ ನಿವಾಸಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಎಂಇಎಸ್‌ ಕಾರ್ಯಕರ್ತೆ ರಂಜನಾ ದೇಸಾಯಿ ಅವರು ಹೃದಯ ಶಸ್ತ್ರಚಿಕಿತ್ಸೆಗಾಗಿ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮಧ್ಯವರ್ತಿ ಎಂಇಎಸ್‌ ಲೆಟರ್‌ ಹೆಡ್​ನಲ್ಲಿ‌‌ ಇವರ ಹೆಸರನ್ನು ವೈದ್ಯಕೀಯ ನೆರವಿಗಾಗಿ ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಇದೀಗ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ ಬೆಳಗಾವಿಯ ಅರಿಹಂತ ಆಸ್ಪತ್ರೆಗೆ ಮಹಾರಾಷ್ಟ್ರದಿಂದ ₹1ಲಕ್ಷ ಹಣ ಸಂದಾಯ ಮಾಡಲಾಗಿದೆ.