ಮಹಾರಾಷ್ಟ್ರದಲ್ಲಿ ಮಳೆ: ಬಸವಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು

| Published : Jul 13 2024, 01:36 AM IST

ಮಹಾರಾಷ್ಟ್ರದಲ್ಲಿ ಮಳೆ: ಬಸವಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲಿರುವುದರಿಂದ ಶುಕ್ರವಾರ ಆಲಮಟ್ಟಿಯಿಂದ 3500 ಕ್ಯುಸೆಕ್ ನೀರು ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ ಎಂದು ಕೆಬಿಜೆಎನ್‌ಎಲ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಡೇಕಲ್

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲಿರುವುದರಿಂದ ಶುಕ್ರವಾರ ಆಲಮಟ್ಟಿಯಿಂದ 3500 ಕ್ಯುಸೆಕ್ ನೀರು ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ ಎಂದು ಕೆಬಿಜೆಎನ್‌ಎಲ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಬಸವಸಾಗರ ಜಲಾಶಯದ ಹಿನ್ನೀರು ವ್ಯಾಪ್ತಿ ಸೇರಿ ಕೃಷ್ಣಾ ನದಿ ತೀರ ಪ್ರದೇಶಗಳಲ್ಲಿ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಹೀಗಾಗಿ 3500 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ದಿನೇದಿನೆ ಜಲಾಶಯದಲ್ಲಿರುವ ನೀರು ಸಂಗ್ರಹ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದಂತಾಗಿದೆ

ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿಯುವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.

ಐಸಿಸಿ ಸಭೆ ಕರೆಯುವಂತೆ ಶಾಸಕರ ಮನವಿ:

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಭಾರಿ ಮುಂಗಾರು ಮಳೆ ಉತ್ತಮವಾಗಿದ್ದು ನಾರಾಯಣಪುರ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಭೆಯನ್ನು ಕರೆಯಬೇಕೆಂದು ನಿಗಮದ ವ್ಯವಸ್ಥಾಪಕರು ಮತ್ತು ಅಧ್ಯಕ್ಷರಿಗೆ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮನವಿ ಸಲ್ಲಿಸಿದ್ದಾರೆ.

ಕಳೆದ ಬಾರಿ ಬರದಿಂದ ತತ್ತರಿಸಿದ್ದ ರೈತಾಪಿ ವರ್ಗಕ್ಕೆ ನಿಗದಿತ ಸಮಯಕ್ಕೆ ನೀರು ಹರಿಬಿಟ್ಟು ರೈತರ ಹಿತಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ದಿನಾಂಕ ನಿಗದಿ ಪಡಿಸಿ ಈ ಭಾಗದ ರೈತರ ಕೃಷಿಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

ಭರ್ತಿಯಾಗುವತ್ತ ಉಭಯ ಜಲಾಶಯಗಳು:

ಮಹಾರಾಷ್ಟ್ರದ ಮಹಾಭಲೇಶ್ವರ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಲ್ಲಿ ಮಾತ್ರ ಆಲಮಟ್ಟಿ ಮತ್ತು ನಾರಾಯಣಪುರದ ಉಭಯ ಜಲಾಶಯಗಳು ಶೀಘ್ರದಲ್ಲಿಯೇ ಭರ್ತಿಯಾಗಲಿದ್ದು, ಈಗಾಗಲೇ ಉತ್ತಮ ಮುಂಗಾರು ಮಳೆಯಾಗಿರುವುದರಿಂದ ಜಲಾಶಯಗಳು ಶೀಘ್ರವೇ ಭರ್ತಿಯಾಗುವ ನಿರೀಕ್ಷೆಗಳಿವೆ.

ಬಸವಸಾಗರ ಒಟ್ಟು ನೀರಿನ ಮಟ್ಟ 492.25 ಅಡಿ ಇದರಲ್ಲಿ 487.21 ಅಡಿಗಳಷ್ಟು ನೀರು ಶುಕ್ರವಾರ ಸಂಜೆ ಸಂಗ್ರಹವಾಗಿದೆ. ಒಟ್ಟು ನೀರಿನ ಸಾಮರ್ಥ್ಯ 33.31 ಟಿಎಂಸಿ ರಲ್ಲಿ 21.26ಟಿಎಂಸಿ ನೀರು ಸಂಗ್ರಹವಾಗಿದೆ.