ಭೀಮಾನದಿಗೆ ಮಹಾರಾಷ್ಟ್ರಾ ನೀರು: ಹೈರಾಣಾದ ರೈತರು

| Published : Aug 27 2025, 01:00 AM IST

ಸಾರಾಂಶ

Maharashtra water to Bhima: Farmers in distress

-ಮಾಘ ಮಳೆಗೆ ಬೆಳೆ ಹಾಳಾಗಿ ಕಂಗಾಲಾದ ರೈತರು । ಭೀಮಾ ನೀರಿನ ವಿಚಾರದಲ್ಲಿ ಮಹಾರಾಷ್ಟ್ರದ ಬೇಕಾಬಿಟ್ಟಿತನ । ಜನರ ಆಕ್ರೋಶ

-----

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ರೈತರ ಪಾಡು ಕೋಳುವವರೆ ಬಲ್ಲ ಎಂಬಂತಾಗಿದೆ. ರೋಹಿಣಿ ಮಳೆಗೆ ಹೆಸರು, ಉದ್ದು ಉತ್ತಿಬಿತ್ತಿ, ಅಲ್ಪ ಹಣ ಮಾಡಿಕೊಳ್ಳಲು ಮುಂದಾಗಿದ್ದ ರೈತರು ಈಗ ಹೈರಾಣಾಗಿದ್ದಾರೆ.

ರೋಹಿಣಿ ಮಳೆ ಬಂದಾದ ನಂತರ 20 ದಿನ ಶುಷ್ಕ ವಾತಾವರಣ ಬೆಳೆ ಹಾಳು ಮಾಡಿತ್ತು, ಮಾಘ ಮಳೆಗೆ ಬೆಳೆ ಮತ್ತೆ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ ಬೇಸಾಯ ಮಾಡಿದ್ದ ಜಾಗದಲ್ಲೇ ಜೋಳ, ಕಡಲೆ ಬಿತ್ತುವ ಅನಿವಾರ್ಯತೆ ಎದುರಾಗಿದೆ.

ಮಹಾರಾಷ್ಟ್ರದವರು ಬೇಸಿಗೆಯಲ್ಲಿ ನದಿ ಒಣಗಿದ ನಂತರವೂ ಹನಿ ನೀರು ಬಿಡಲೊಪ್ಪದೆ, ಇದೀಗ ಮಳೆಗಾಲದಲ್ಲಿ ಹೇಳದೆ ಕೇಳದೆ ಲಕ್ಷಾಂತರ ಕ್ಯುಸೆಕ್‌ ನೀರು ಹರಿಬಿಡ್ತಾರೆ, ಇದನ್ನ ಪ್ರಶ್ನಿಸುವ ಎದೆಗಾರಿಕೆ ಜನನಾಯಕರ ಬಳಿ ಇಲ್ಲ. ಸರ್ಕಾರವೂ ಈ ವಿಷಯವಾಗಿ ಮೌನವಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಗಾಣಗಾಪುರ, ತೇಲ್ಲೂರ್‌, ಮಣ್ಣೂರ, ಉಡಚಣ, ಕುಡಿಗನೂರ್‌, ಶೇಷಗಿರಿವಾಡಿ, ದುದ್ದಣಗಿ. ಮಂಗಳೂರು ಸೇರಿದಂತೆ ಅಫಜಲಪುರ, ಜೇವರ್ಗಿ, ಶಹಾಬಾದ್‌, ಕಲಬುರಗಿ, ಚಿತ್ತಾಪುರ ತಾಲೂಕಿನ 105ಕ್ಕೂ ಹೆಚ್ಚು ಹಳ್ಳಿಗಳ ನೂರಾರು ರೈತರು ಭೀಮಾ ನದಿ ನೀರಿನ ವಿಷಯದಲ್ಲಿ ಮಹಾರಾಷ್ಟ್ರದ ಧೋರಣೆ, ರಾಜ್ಯ ಸರ್ಕಾರದ ಮೌನವನ್ನು ಖಂಡಿಸುತ್ತಿದ್ದಾರೆ.

ಮಳಿಗಾಲದಲ್ಲಿ ನೀರು ಹರಿ ಬಿಡ್ತಾರೆ, ಬೇಸಿಗೆಯಲ್ಲಿ ಇದೇ ಉಜನಿಯಿಂದ ನೀರು ಬಿಡುವುದಿಲ್ಲ, ಆದರೆ, ಮಳೆಗಾಲದಲ್ಲಿ ನೀರು ಬಿಟ್ಟು ನಮ್ಮನ್ನ ಮುಳುಗಿಸುವ ಪ್ರಯತ್ನದಲ್ಲಿದ್ದಾರೆ ಎಂದು ತೇಲ್ಲೂಣಗಿ, ಗಾಣಗಾಪುರ ರೈತರು ಗೋಳಾಡುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯ ಸರ್ಕಾರ ಭೀಮಾ ನದಿ ವಿಚಾರದಲ್ಲಿ ವರ್ತಿಸುತ್ತಿರುವ ರೀತಿಗೆ ಆಕ್ರೋಶಿತರಾಗಿದ್ದಾರೆ. ಶಾಸಕರು, ಸಚಿವರಿಗೆ ಈ ಬಗ್ಗೆ ಯಾವುದೇ ವಿಷಯ ಧ್ವನಿ ಎತ್ತುವ ತಾಕತ್ತಿಲ್ಲವೆಂದು ರೈತರು ದೂರಿದ್ದಾರೆ.

ನಮ್ಮ ಪಾಲಿನ 15 ಟಿಎಂಸಿ ನೀರನ್ನು ಬಳಸುವಲ್ಲಿಯೇ ನಾವು ಮುಗ್ಗರಿಸಿದ್ದೇವೆ. ಈಗ ನೋಡಿದರೆ ಮಹಾರಾಷ್ಟ್ರ ಬೇಕಾಬಿಟ್ಟಿ ನೀರು ಹರಿಬಿಟ್ಟು ತನಗೆ ಯಾರದ್ದೇನು ಅಡಚಣೆ ಇಲ್ಲವೆಂಬಂತೆ ಧೋರಣೆ ತೋರುತ್ತಿದೆ. ಮಹಾರಾಷ್ಟ್ರ ಸರ್ಕಾರದ ಈ ಧೋರಣೆಗೆ ಸರ್ಕಾರ, ಯಾವೊಬ್ಬ ಶಾಸಕರು, ಸಚಿವರು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ, ನಮ್ಮ ಗೋಳಿಗೆ ಕೊನೆಯೇ ಇಲ್ಲವೆಂದು ರೈತರು ಗೋಳಾಡುತ್ತಿದ್ದಾರೆ.

---------------

ಸದನದಲ್ಲಿ ಮಾತು- ಫಲಶೃತಿ ಶೂನ್ಯ

ಸದನದಲ್ಲಿ ಅಫಜಲಪುರ, ಶಾಸಕ ಎಂವೈ ಪಾಟೀಲ್‌, ಅಲ್ಲಂಪ್ರಭು ಪಾಟೀಲ ಭೀಮಾ ನದಿ ನೀರಿನ ಹಂಚಿಕೆ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಯತ್ನ 2 ಮಾಡಿದ್ದರೂ ಫಲಶೃತಿ ಶೂನ್ಯ. ಏಕೆಂದರೆ ರಾಜ್ಯ ಸರ್ಕಾರಕ್ಕೆ ನದಿ ನೀರಿನ ಹಂಚಿಕೆ, ನೀರಿನ ಬಳಕೆಯಲ್ಲಿನ ಏರಿಳಿತ ಇವನ್ನೆಲ್ಲ ಅಂತರಾಜ್ಯ ವಿವಾದವಾಗಿ ಪ್ರಶ್ನಿಸುವ ಆಸಕ್ತಿ ಇದ್ದಂತಿಲ್ಲ. ಹೀಗಾಗಿ ಪ್ರಭುತ್ವದ ಅನಾದರಕ್ಕೊಳಗಾಗಿರುವ ಭೀಮಾ ನದಿ ನೀರಿನ ವಿಷಯದಿಂದಾಗಿ ಜಿಲ್ಲೆಯ ರೈತರಿಗೆ ಗೋಳಾಟ ತಪ್ಪಿದ್ದಲ್ಲ ಎಂಬಂತಾಗಿದೆ.

-----------------

ಗೋಳಿಗೆ ಕೊನೆಯೇ ಇಲ್ಲ

ಮೇಲೆ ಮಳೆ, ಕೆಳಗೆ ಹೊಳೆ ಎಂದು ಬೆಳೆ ಹಾಳಾಗಿ ಗೋಳಾಡುತ್ತಿದ್ದಾರೆ. ಬೇಸಿಗೆಯಲ್ಲಿ ನದಿ ಬತ್ತುತ್ತದೆ, ಕಳೋರಿಲ್ಲ, ಮಳಿಗಾಲದಲ್ಲಿ ಪ್ರವಾಹ ಬರ್ತದೆ ಕೇಳೋರಿಲ್ಲ. ಬೆಳೆ ಹಾಳು. ಹೀಗಾಗಿ ಭೀಮಾ ತೀರದ ರೈತರ ಗೋಳಿಗೆ ಕೊನೆಯೇ ಇಲ್ಲವೆಂಬಂತಾಗಿದೆ. ಜನನಾಯಕರು ಭೀಮಾ ನದಿ ನೀರಿನ ವಿಚಾರದಲ್ಲಿ ಮಹಾ ಮೋಸವನ್ನ ಪ್ರಶ್ನಿಸಬೇಕು, ಅಂತಾರಾಜ್ಯ ವಿವಾದ ಎಂದು ವಿಷಯ ಕೇಂದ್ರದ ಮುಂದಿಟ್ಟು ಗಮನಹರಿಸಬೇಕೆಂದು ಕೋರಿದಾಗ ಮಾತ್ರ ಸಮಸ್ಯೆಗೆ ಪರಿಹಾರ, ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ಮುಳಗೋದು, ಬೇಸಿಗೆಯಲ್ಲಿ ಒಣಗೋದು ಎಂದು ರೈತರೇ ಹೇಳುತ್ತಿದ್ದಾರೆ.

---------------

ಫೋಟೋ- ಹೆವ್ವಿ ರೇನ್‌

ಫೋಟೋ- ಎಂಎಲ್‌ಎ ಕಲಬುರಗಿ

ಫೋಟೋ- ಫಾರ್ಮರ್‌ ಭೀಮಾ