ಕನ್ನಡಪ್ರಭ ವಾರ್ತೆ ಕಾರವಾರ
ಆಮೆ ಅತ್ಯಂತ ನಿಧಾನವಾಗಿ ಚಲಿಸುವ ಜೀವಿ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದೇ ಆಮೆಗಳು ಸಮುದ್ರದಲ್ಲಿ ಸಾವಿರಾರು ಕಿಮೀ ಕ್ರಮಿಸಿ ಅಚ್ಚರಿ ಮೂಡಿಸುತ್ತವೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಮಹಾರಾಷ್ಟ್ರ ಕರಾವಳಿಯಿಂದ ಹೊರಟ ಆಮೆಯೊಂದು ಬರೋಬ್ಬರಿ 3,500 ಕಿಮೀ ಪ್ರಯಾಣ ಬೆಳೆಸಿ ಇದೀಗ ಕಾರವಾರದ ಕಡಲತೀರ ತಲುಪಿದೆ. ಕಳೆದ 12 ದಿನಗಳಿಂದ ಈ ಆಮೆ ಕಾರವಾರ ಕರಾವಳಿಯ ಹೊರವಲಯದಲ್ಲಿ ಸುತ್ತಾಡುತ್ತಿದೆ.ಕಳೆದ 2025ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ದಹಾನು ಕರಾವಳಿಯಲ್ಲಿ ಆಲಿವ್ ರಿಡ್ಲಿ ಪ್ರಭೇದದ ಹೆಣ್ಣು ಆಮೆಯೊಂದು ಮೀನುಗಾರರ ಬಲೆಗೆ ಬಿದ್ದಿತ್ತು. ಈ ಆಮೆಯನ್ನು ಸುರಕ್ಷಿತವಾಗಿ ರಕ್ಷಿಸಿದ ವಿಜ್ಞಾನಿಗಳು, ಅದಕ್ಕೆ ಧವಳ ಲಕ್ಷ್ಮಿ ಎಂದು ನಾಮಕರಣ ಮಾಡಿದ್ದರು. ಆಮೆಯ ಚಲನವಲನ ಹಾಗೂ ವಲಸೆ ಮಾರ್ಗವನ್ನು ಅಧ್ಯಯನ ಮಾಡುವ ಉದ್ದೇಶದಿಂದ, ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವಿಜ್ಞಾನಿ ಸುರೇಶ್ ಹಾಗೂ ಮಹಾರಾಷ್ಟ್ರ ಮ್ಯಾಂಗ್ರೋವ್ ಫೌಂಡೇಶನ್ ತಂತ್ರಜ್ಞರು ಸೇರಿ ಆಮೆಯ ಬೆನ್ನಿಗೆ ಸ್ಯಾಟಲೈಟ್ ಡಿವೈಸ್ ಅಳವಡಿಸಿ ಮರಳಿ ಸಮುದ್ರಕ್ಕೆ ಬಿಟ್ಟಿದ್ದರು.
ಸ್ಯಾಟಲೈಟ್ ಟ್ರಾನ್ಸ್‌ಮಿಟರ್ ಮೂಲಕ ಮ್ಯಾಂಗ್ರೋವ್ ಫೌಂಡೇಶನ್ ಆಫ್ ಮಹಾರಾಷ್ಟ್ರ ತಂಡ ಆಮೆಯ ಓಡಾಟವನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದೆ. ಧವಳ ಲಕ್ಷ್ಮಿ ಆಮೆಯು ಮಹಾರಾಷ್ಟ್ರ ಕರಾವಳಿಯಿಂದ ಪಶ್ಚಿಮಕ್ಕೆ ಆಳ ಸಮುದ್ರವನ್ನು ದಾಟಿ, ಓಮನ್ ದೇಶದ ಸಮೀಪವಿರುವ ಮಸೀರಾ ದ್ವೀಪದವರೆಗೂ ಯಶಸ್ವಿಯಾಗಿ ತಲುಪಿತ್ತು. ಅಲ್ಲಿಂದ ಮರಳಿ ಭಾರತದತ್ತ ಪ್ರಯಾಣ ಬೆಳೆಸಿದ ಈ ಆಮೆ ಕೇರಳ, ಮುರುಡೇಶ್ವರ ಸೇರಿದಂತೆ ವಿವಿಧ ಕಡಲತೀರಗಳಲ್ಲಿ ಓಡಾಟ ನಡೆಸಿ, ಸದ್ಯ ಕಾರವಾರದ ಕಾಂಟಿನೆಂಟಲ್ ಶೆಲ್ಫ್ ಬ್ರೇಕರ್ ಪ್ರದೇಶದಲ್ಲಿ ಬೀಡುಬಿಟ್ಟಿದೆ. ತಾಂತ್ರಿಕ ಉಪಕರಣ ಹೊಂದಿರುವ ಈ ಆಮೆಯ ಚಲನವಲನವು ಸಾಗರ ವಿಜ್ಞಾನಿಗಳ ಅಧ್ಯಯನಕ್ಕೆ ಅತ್ಯಮೂಲ್ಯ ಮಾಹಿತಿ ಒದಗಿಸುತ್ತಿದೆ.ಆಮೆಗಳ ಈ ಅಚ್ಚರಿಯ ಪಯಣದ ಕುರಿತು ಮಾಹಿತಿ ನೀಡಿದ ಕಾರವಾರದ ಸಾಗರ ವಿಜ್ಞಾನಿ ಡಾ. ಶಿವಕುಮಾರ ಹರಗಿ ಸಮುದ್ರದ ಆಮೆಗಳು ಆಹಾರವನ್ನು ಹುಡುಕಿಕೊಂಡು ಹಾಗೂ ಸಂತಾನೋತ್ಪತ್ತಿಗಾಗಿ ಸಮುದ್ರದಲ್ಲಿ ಸಾವಿರಾರು ಕಿಮೀ ಓಡಾಟ ನಡೆಸುತ್ತವೆ. ಕೆಲವು ಆಮೆಗಳು ಒಂದೇ ವರ್ಷದಲ್ಲಿ ಭಾರಿ ದೂರ ಸಂಚರಿಸಿದ ಉದಾಹರಣೆಗಳಿವೆ. ವಿಶೇಷವೆಂದರೆ, ಅವು ಎಲ್ಲಿಗೇ ಹೋದರೂ, ಕೊನೆಗೆ ತಾವು ಮೊಟ್ಟೆಯೊಡೆದು ಬಂದ ಮೂಲ ಸ್ಥಾನಕ್ಕೇ ಮರಳುತ್ತವೆ ಎಂದು ವಿವರಿಸಿದ್ದಾರೆ.
