ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶ-ತಹಸೀಲ್ದಾರ್‌ ಎಸ್‌. ರೇಣುಕಮ್ಮ

| Published : Oct 18 2024, 12:14 AM IST

ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶ-ತಹಸೀಲ್ದಾರ್‌ ಎಸ್‌. ರೇಣುಕಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ಪರಿಸರಕ್ಕೆ ವ್ಯಕ್ತಿತ್ವದ ಅನಾವರಣ ಮಾಡುವಂತಹ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶವಾಗಿರುವುದಲ್ಲದೆ ಅನುಕರಣೀಯರು ಆಗಿದ್ದಾರೆ ಎಂದು ತಾಲೂಕು ತಹಸೀಲ್ದಾರ್‌ ಎಸ್.ರೇಣುಕಮ್ಮ ತಿಳಿಸಿದರು.

ಹಾನಗಲ್ಲ: ಸಾಂಸ್ಕೃತಿಕ ಪರಿಸರಕ್ಕೆ ವ್ಯಕ್ತಿತ್ವದ ಅನಾವರಣ ಮಾಡುವಂತಹ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶವಾಗಿರುವುದಲ್ಲದೆ ಅನುಕರಣೀಯರು ಆಗಿದ್ದಾರೆ ಎಂದು ತಾಲೂಕು ತಹಸೀಲ್ದಾರ್‌ ಎಸ್.ರೇಣುಕಮ್ಮ ತಿಳಿಸಿದರು.ಗುರುವಾರ ಹಾನಗಲ್ಲಿನ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹಾಪುರುಷರ ದಿನಾಚರಣೆಗಳು ಅವರ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ, ಅವರ ಆದರ್ಶಗಳನ್ನು ಜ್ಞಾಪಿಸಿಕೊಂಡು ಆಚರಿಸುವ ಕಾರ್ಯಕ್ಕೆ ಪ್ರೇರಣೆಗಾಗಿ ಇವೆ. ಸರಕಾರ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ರೀತಿ ನೀತಿಗಳನ್ನು ಮಹಾಪುರುಷರ ನಡೆಯಲ್ಲಿ ಪರಿಚಯಿಸುವ ಕಾರ್ಯ ಕೈಗೊಂಡಿದೆ. ಇದು ಆದರ್ಶ ಹಾಗೂ ಮಾರ್ಗದರ್ಶಿ ಕಾರ್ಯ ಎಂದರು.ವಾಲ್ಮೀಕಿ ಸಮಾಜದ ಮುಖಂಡ ಫಕ್ಕೀರಪ್ಪ ಓಲೆಕಾರ ಮಾತನಾಡಿ, ದಾರಿ ತಪ್ಪಿದ ವಾಲ್ಮೀಕಿಯನ್ನು ಮಹರ್ಷಿ ವಾಲ್ಮೀಕಿ ಮಾಡಿದ ಸಂದರ್ಭದಿಂದಾಗಿ ನಾಡು ಮರೆಯದ ಮಹಾ ಕಾವ್ಯವನ್ನು ನೀಡಲು ಸ್ಫೂರ್ತಿಯಾಯಿತು. ಮಹರ್ಷಿ ವಾಲ್ಮೀಕಿ ಚರಿತ್ರೆ ಇಂದಿನ ಸಮಾಜಕ್ಕೆ ಬಹು ದೊಡ್ಡ ಪಾಠವಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ಚರಿತೆಯನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಹಾಗೂ ವಿಚಾರಗಳು ಪ್ರತಿ ಮನೆ ಶಾಲೆ ಮಕ್ಕಳು ಮಹನೀಯರಿಗೆ ತಲುಪುವ ಮೂಲಕ ಅವರ ಆದರ್ಶಗಳ ಪರಿಚಯವಾಗಬೇಕು ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಕಾವ್ಯ ಜಗತ್ತಿಗೆ ಅಚ್ಚಳಿಯದ ಕವಿಕುಲ ಸಾರ್ವಭೌಮರಾಗಿ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ನಿತ್ಯ ಪೂಜೆಗೆ ಸಲ್ಲುವಂತಹವರು. ಮತ ಧರ್ಮಗಳ ಮೇರೆ ಮೀರಿ ಎಲ್ಲರ ಮನದಲ್ಲಿ ಉತ್ಕೃಷ್ಟ ವಿಚಾರ ಧಾರೆಗಳನ್ನು ಬಿತ್ತಿ, ಆದರ್ಶ ಮೌಲ್ಯಗಳನ್ನು ಅನಾವರಣಗೊಳಿಸಿದ ಹೆಮ್ಮೆಯ ಸಾರ್ವಭೌಮ ಕವಿ ಮಹರ್ಷಿ ವಾಲ್ಮೀಕಿ ಆಗಿದ್ದಾರೆ. ಇಡೀ ಜಗತ್ತೇ ಗೌರವಿಸುಂತಹ ಚಿಂತನೆಗಳಿಗೆ ಸಾಕ್ಷಿಯಾಗಿರುವ ಅವರು ರಾಮಾಯಣದ ಮೂಲಕ ಇಡೀ ಜಗತ್ತಿಗೆ ಒಬ್ಬ ಮಹಾತ್ಮನ ಚರಿತ್ರೆಯನ್ನು ಧಾರ್ಮಿಕ ನೈತಿಕ ನೆಲೆಯಲ್ಲಿ ಕಟ್ಟಿಕೊಡುವ ಕೃತಿ ನೀಡಿದ್ದಾರೆ ಎಂದರು.ವಾಲ್ಮೀಕಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪರಸಪ್ಪ ಮುನಿಯಣ್ಣನವರ, ಹೊನ್ನಪ್ಪ ಅಕ್ಕಿವಳ್ಳಿ, ಸುಭಾಸ ತಳವಾರ, ಸತೀಶ ಅಂಕೋಲ, ಪ್ರಕಾಶ ನಂದಿಕೊಪ್ಪ, ಶಿವಕುಮಾರ ತಳವಾರ, ಮುಂಜುನಾಥ ಗುರಣ್ಣನವರ, ಬಸವರಾಜ ಓಲೇಕಾರ, ವಸಂತ ವೆಂಕಟಾಪುರ, ರೇಖಾ ಕರಿಭೀಮಣ್ಣನವರ, ಶಿವಕುಮಾರ ಭದ್ರಾವತಿ, ರಮೇಶ ಕರಿಭಿಮಣ್ಣನವರ, ಶ್ರೀಕಾಂತ ಬೈಚವಳ್ಳಿ, ಹೊನ್ನಪ್ಪ ದೊಡ್ಡಮನಿ, ಗ್ರೇಡ್-೨ ತಹಸೀಲ್ದಾರ್‌ ರವಿಕುಮಾರ ಕೊರವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಗಂಗಾ ಹಿರೇಮಠ, ಅರವಿಂದ ಸುಗಂಧಿ, ಡಾ. ಗಿರೀಶ ರಡ್ಡೇರ, ವಾಯ್.ಕೆ. ಜಗದೀಶ, ಬಿ.ಎನ್. ಸಂಗೂರ, ರವಿ ಅರ್ಕಸಾಲಿ ಮೊದಲಾದವರು ಇದ್ದರು.ಕಾರಣ ಕೇಳಿ ನೊಟೀಸ್: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್‌ ನೀಡಿ ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮಾಜ ಮುಖಂಡರು ತಹಸೀಲ್ದಾರ್‌ ಒತ್ತಾಯಿಸಿದರು. ಕೂಡಲೇ ಗೈರುಹಾಜರಾದ ಅಧಿಕಾರಿಗಳಿಗೆ ನೊಟೀಸ್‌ ನೀಡಲು ಸ್ಥಳದಲ್ಲಿಯೇ ತಾಲೂಕು ತಹಸೀಲ್ದಾರ್‌ ಎಸ್.ರೇಣುಕಮ್ಮ ಸೂಚಿಸಿದರು. ಬೆ‍ಳಗ್ಗೆ ೧೦.೩೦ಕ್ಕೆ ಆರಂಭವಾಗಬೇಕಾದ ಕಾರ್ಯಕ್ರಮ ತಡವಾಗಿರುವುದಕ್ಕೆ ಹಲವರು ಕಾರ್ಯಕ್ರಮ ಆರಂಭ ಮಾಡಲು ವಿನಂತಿಸಿದರು. ಆದರೆ ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಬೆಳೆಹಾನಿ ತಂಡ ತಾಲೂಕಿಗೆ ಆಗಮಿಸಿದ್ದರಿಂದ ಅವರೊಂದಿಗೆ ಸರ್ವೇ ಕಾರ್ಯದಲ್ಲಿ ತೊಡಗಿದ್ದರು. ಅವರು ಕಾರ್ಯಕ್ರಮಕ್ಕೆ ಬರಲಾಗಲಿಕ್ಕಿಲ್ಲ ಎಂದು ಸಂಘಟಕರು ತಿಳಿಸಿದರು. ಆದರೆ ತಾಲೂಕು ತಹಸೀಲ್ದಾರ್‌ರು ಆಗಮಿಸದ ಹೊರತು ಕಾರ್ಯಕ್ರಮ ನಡೆಸಕೂಡದು ಎಂದು ಸಮಾಜದ ಮುಖಂಡರು ಆಗ್ರಹಿಸಿದರು. ಅರ್ಧ ಗಂಟೆ ತಡವಾಗಿ ಬಂದ ತಹಸೀಲ್ದಾರ್‌ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.