ಸಾರಾಂಶ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಶ್ರೀ ಮಹರ್ಷಿ ವಾಲ್ಮೀಕಿ ಅವರು ಇಡೀ ದೇಶಕ್ಕೆ ಆಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಭಾನುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ , ಪಟ್ಟಣ ಪಂಚಾಯಿತಿ ವಿವಿಧ ಇಲಾಖೆಗಳು ತರೀಕೆರೆ ಮತ್ತು ಅಜ್ಜಂಪುರ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ತರೀಕೆರೆ ಮತ್ತು ಅಜ್ಜಂಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪಾಳ್ಳೆಗಾರ್ ಕ್ಯಾಂಪ್.ನಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶ್ರೀ ದೇವರದಾಸಿಮಯ್ಯ, ಶ್ರೀ ಕನಕದಾಸರು, ಶ್ರೀ ಬಸವಣ್ಣ ಅನೇಕ ಮಹನೀಯರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಹನೀಯರ ಜಯಂತಿಯನ್ನು ಪ್ರತಿಯೊಬ್ಬರೂ ಆಚರಿಸಬೇಕು. ಪಟ್ಟಣದಲ್ಲಿ ಶ್ರೀ ಸರ್ಜಾ ಹನುಮಪ್ಪನಾಯಕರ ಪುತ್ಥಳಿಯನ್ನು ಖಂಡಿತಾ ಸ್ಪಾಪಿಸ ಲಾಗುವುದು. ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂಬ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಪಾಳ್ಳೆಗಾರರು ತರೀಕೆರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘಕ್ಕೆ ಸಮುದಾಯ ಭವನ ನಿರ್ಮಿಸಬೇಕು. ಸರ್ಜಾ ಹನುಮಪ್ಪನಾಯಕರ ಪುತ್ಥಳಿ ಸ್ಫಾಪಿಸಬೇಕು ಎಂದು ಮನವಿ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಪಟ್ಟಣದಲ್ಲಿ ಸರ್ಜಾ ಹನುಮಪ್ಪನಾಯಕರ ಪುತ್ಥಳಿ ಸ್ಥಾಪಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಶಾಸಕ ಜಿ.ಎಚ್.ಶ್ರೀನಿವಾಸ್ ಅರ್ಥಿಕ ನೆರವೂ ನೀಡಿದ್ದು ಸಮಿತಿ ಕೂಡ ರಚಿಸಲಾಗಿತ್ತು. ಇದೀಗ ಖಂಡಿತ ಸರ್ಜಾ ಹನುಮಪ್ಪ ನಾಯಕರ ಪುತ್ಥಳಿ ನಿರ್ಮಿಸಲಾಗುವುದು ಎಂದು ಹೇಳಿದರು.ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ ಕವಿಕುಲ ಸಾರ್ವಭೌಮರು ಎಂದು ಪ್ರಖ್ಯಾತಿ ಪಡೆದ ಶ್ರೀ ಮಹರ್ಷಿ ವಾಲ್ಮೀಕಿ ಕವಿಗಳು, ತತ್ವಜ್ಞಾನಿಗಳು, ಶಿಕ್ಷಣತಜ್ಞರು, ದಾರ್ಶನಿಕರು ಅಗಿದ್ದಾರೆ. ಅವರು ರಚಿಸಿದ ರಾಮಾಯಣ ಮಹಾಕಾವ್ಯ 24 ಸಾವಿರ ಶ್ಲೋಕಗಳು, 500 ಸರ್ಗಗಳು, 7 ಕಾಂಡಗಳು, 2 ಲಕ್ಷದ 800 ಪದಗಳನ್ನು ಒಳಗೊಂಡಿದೆ, ಈ ಮಹಾ ಕಾವ್ಯ 1000 ಬಾಷೆಗಳಿಗೆ ತರ್ಜುಮೆಯಾಗಿದೆ. ವಾಲ್ಮೀಕಿ ಮೂಲ ರಾಮಾಯಣ ಆಧರಿಸಿ 300 ಬಗೆಯ ರಾಮಾಯಣ ರಚಿತವಾಗಿದೆ. ಅದರಲ್ಲಿ ಪ್ರಮುಖವಾಗಿ ಜೈನ ರಾಮಾಯಣ, ತುಳಸಿ ರಾಮಾಯಣ, ಸೀತಾ ರಾಮಾಯಣ ರಚಿತವಾಗಿದೆ ಎಂದು ಹೇಳಿದರು.
ಇದೇ ರಾಮಾಯಣ ಆಧರಿಸಿ ರಾಷ್ಟ್ರಕವಿ ಕುವೆಂಪು ರಚಿಸಿದ ಶ್ರೀ ರಾಮಾಯಣ ದರ್ಶನಂ ಮಹಾ ಕೃತಿ ಹಾಗೂ ತೆಲುಗು ಕವಿ ವಿಶ್ವನಾಥ ಸತ್ಯನಾರಾಯಣ ಅವರು ರಚಿಸಿದ ಶ್ರೀ ರಾಮಾಯಣ ಕಲ್ಪವೃಕ್ಷಮು ಎಂಬ ಮಹಾ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ನಮ್ಮ ದೇಶದ ಸಂಸ್ಕೃತಿ ಕಲೆ ಸಾಹಿತ್ಯ, ಚಿತ್ರಕಲೆ ದೇಶದ ಪ್ರಕೃತಿ ಇಡೀ ಜಗತ್ತಿಗೆ ಪರಿಚಯಿಸಿದೆ ಎಂದು ಹೇಳಿದರು.ತರೀಕೆರೆ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗೋವಿಂದಪ್ಪ , ಅಜ್ಜಂಪುರ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಅಣ್ಣಪ್ಪ ಎ.ಆರ್. ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ದತ್ತಾತ್ರೇಯ ಟಿ.ಎಲ್. ಉಪನ್ಯಾಸ ನೀಡಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪುರಸಭೆ ಸದಸ್ಯ ಕುಮಾರಪ್ಪ, ತಹಸೀಲ್ದಾರ್ ವಿಶ್ವಜೀತ ಮೇಹತಾ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶು ರಾಮಪ್ಪ ಎಚ್.ಎ.ಮತ್ತಿತರರು ಭಾಗವಹಿಸಿದ್ದರು.20ಕೆಟಿಆರ್.ಕೆ.10ಃತರೀಕೆರೆಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ವಸಂತ ಕುಮಾರ್, ಪುರಸಭೆ ಸದಸ್ಯ ಕುಮಾರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ತರೀಕೆರೆ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗೋವಿಂದಪ್ಪ, ಅಜ್ಜಂಪುರ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಅಣ್ಣಪ್ಪ ಎ.ಆರ್. ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮತ್ತಿತರರು ಇದ್ದರು.