ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ

| Published : Oct 09 2025, 02:02 AM IST

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವಾರ್ತೆ ಬಸವಬಾಗೇವಾಡಿ ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಅವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಾರೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಸಾಲವಾಡಗಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವಬಾಗೇವಾಡಿ

ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಅವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಾರೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಸಾಲವಾಡಗಿ ಹೇಳಿದರು.

ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ಆದಿಕವಿ ಮಹರ್ಷಿ ವಾಲ್ಮೀಕಿ ನೀಡಿದ್ದಾರೆ. ಅವರು ರಾಮಾಯಣ ಕಾವ್ಯದ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಅವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಬ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಯಲ್ಲಪ್ಪ ನಾಯಕ ಮಾತನಾಡಿ, ೨೪ ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯವು ಭಾರತದ ಚಿತ್ರಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಗೀತ, ನೃತ್ಯ, ರಂಗಭೂಮಿ, ನಾಟಕ, ಯಕ್ಷಗಾನ, ಚಲನಚಿತ್ರ, ಮುಂತಾದ ಕ್ಷೇತ್ರಗಳ ಮೇಲೆ ಅಗಾಧ ಪ್ರಭಾವ ಬೀರಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ಮೂಲ ಭಾಗಗಳಲ್ಲಿ ಅನುವಾದಗೊಂಡಿರುವ ರಾಮಾಯಣವು ವಿಶ್ವಸಾಹಿತ್ಯ ಮಟ್ಟದ ಮಹಾಕಾವ್ಯವಾಗಿ ಜನಪ್ರಿಯತೆ ಪಡೆದಿದೆ ಎಂದರು.ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮತ್ತು ತೆಲಗು ಕವಿ ವಿಶ್ವನಾಥ ಸತ್ಯನಾರಾಯಣರಿಂದ ರಚಿತವಾದ ರಾಮಾಯಣ ಕಲ್ಪವೃಕ್ಷಮು ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಮಹರ್ಷಿ ವಾಲ್ಮೀಕಿಯಂತಹ ಕವಿ, ರಾಮಾಯಣದಂತಹ ಮಹಾಕಾವ್ಯ ನಮಗೆ ದೊರೆತಿರುವುದು ಭಾಗ್ಯ ಎಂದು ಬಣ್ಣಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಡಾ.ಎಸ್.ಬಿ.ಜನಗೊಂಡ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು.