ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮನುಷ್ಯ ಸದಾ ಪರಸ್ಪರ ಸಹಕಾರ ಸಹಬಾಳ್ವೆ, ಹೊಂದಾಣಿಕೆ, ವಿಶ್ವಾಸ, ನಂಬಿಕೆಗಳನ್ನು ಆಧರಿಸಿ ಜೀವನ ನಿರ್ವಹಿಸಬೇಕು, ರಾಕ್ಷಸ ಪ್ರವೃತ್ತಿ ಮನುಷ್ಯನ ಮಾನವೀಯತೆಗೆ ವಿರುದ್ಧವಾದುದು, ಇದು ಪರಸ್ಪರ ಯುದ್ಧಕ್ಕೆ ನಾಂದಿ ಹಾಡುತ್ತದೆ, ರಾಮಾಯಣದಲ್ಲಿ ರಾವಣನದ್ದೂ ರಾಕ್ಷಸ ಪ್ರವೃತ್ತಿ ಆಗಿದ್ದರಿಂದಲೇ ದೈವ ಸ್ವರೂಪಿ ಶ್ರೀ ರಾಮನಿಂದ ರಾವಣ ಹತನಾಗಿ ವಿನಾಶಕ್ಕೊಳಗಾಗುವ ಪರಿಸ್ಥಿತಿ ಎದುರಾಯಿತು, ಎಲ್ಲರೂ ರಾಕ್ಷಸ ಪ್ರವೃತ್ತಿ ತ್ಯಜಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಗ್ರಂಥದಲ್ಲಿ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ರಾಮನ ಮೂಲಕ ಮನುಕುಲಕ್ಕೆ ಪಿತೃ ವಾಕ್ಯ ಪರಿಪಾಲನೆ, ಅಧಿಕಾರದ ತ್ಯಾಗ, ಏಕ ಪತ್ನಿ ವ್ರತಸ್ಥ, ಸೀತಾ ದೇವಿಯ ಪಾವಿತ್ರ್ಯತೆ, ಆಂಜನೇಯ ಸ್ವಾಮಿಯ ಸ್ವಾಮಿ ನಿಷ್ಠೆ , ರಾವಣನ ಪರ ಸ್ತ್ರೀ ವ್ಯಾಮೋಹ, ರಾವಣನ ವಧೆಯ ಮೂಲಕ ರಾಕ್ಷಸ ಪ್ರವೃತ್ತಿಯ ಸಂಹಾರ, ತಾಯಿ ಮಾತು ಪರಿಪಾಲನೆ ಸೇರಿದಂತೆ ಹಲವು ಆದರ್ಶಗಳನ್ನು ಜಗತ್ತಿಗೆ ಅರ್ಥ ಮಾಡಿಸಿದ್ದಾರೆ, ಈ ನಿಟ್ಟಿನಲ್ಲಿ ರಾಕ್ಷಸ ಪ್ರವೃತ್ತಿ ಮಿತಿ ಮೀರಿದರೆ ವಿನಾಶ ನಿಶ್ಚಿತ ಎಂಬ ಸಂದೇಶವನ್ನು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ನೀಡಿದ್ದಾರೆ, ಇಂಥ ಮನಸ್ಥಿತಿವುಳ್ಳವರು ಇಂದಿನ ಆಧುನಿಕ ಯುಗದಲ್ಲೂ ಇರುವುದು ವಿಪರ್ಯಾಸ, ಈ ರೀತಿಯ ಪ್ರವೃತ್ತಿಯು ಪ್ರಸ್ತುತ ಕಾಲಕ್ಕೂ ಅನ್ವಯಿಸುತ್ತಿದೆ, ಇದಕ್ಕೆ ರಷ್ಯಾ ಉಕ್ರೇನ್ ಯುದ್ಧ ಜತೆಗೆ ಈಗಷ್ಟೇ ಆರಂಭವಾಗಿರುವ ರಷ್ಯಾ ಲೆಬೆನಾನ್ ಇಸ್ರೇಲ್ ಯುದ್ದಗಳೇ ನಿದರ್ಶನಗಳಾಗಿವೆ, ಅಧರ್ಮ ಎಲ್ಲೆ ಮೀರಿದರೆ, ಯಾರು ರಾಕ್ಷಸ ಪ್ರವೃತ್ತಿಯನ್ನು ಮುಂದುವರಿಸುವರೋ ಅವರ ವಿನಾಶ ಖಂಡಿತ. ಅಧರ್ಮ ಅಳಿಸಿ ಧರ್ಮ ಶಾಶ್ವತವಾಗಿ ಉಳಿಯುತ್ತದೆ, ವಾಲ್ಮೀಕಿ ಮಹರ್ಷಿಗಳೂ ಇದನ್ನೇ ರಾಮಾಯಣದಲ್ಲಿ ಬಿತ್ತರಿಸಿದ್ದಾರೆ. ರಾಕ್ಷಸ ಪ್ರವೃತ್ತಿ ಹೆಚ್ಚಾದರೆ ಶ್ರೀ ರಾಮನಂಥ ದೈವ ಪುರುಷರು ಭೂಮಿಯಲ್ಲಿ ಜನ್ಮವೆತ್ತಿ ಭೂಮಿ ಮತ್ತು ಮನುಕುಲವನ್ನು ರಕ್ಷಿಸುತ್ತಾರೆ ಎಂದರು. ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ರಾಮಾಯಣ ಮತ್ತು ಅದರಲ್ಲಿ ಬರುವ ಎಲ್ಲಾ ಪಾತ್ರಗಳೂ ಇಡೀ ಮನುಕುಲವನ್ನೇ ಎಚ್ಚರಿಸುತ್ತವೆ, ಈ ನಿಟ್ಟಿನಲ್ಲಿ ವಾಲ್ಮೀಕಿ ಮಹರ್ಷಿಗಳ ದೂರಾಲೋಚನೆ, ಅವರ ದೈವತ್ವದ ಬರವಣಿಗೆಯು ಅವರ ಜ್ಞಾನ ಭಂಡಾರವನ್ನು ಸಾಕ್ಷೀಕರಿಸುತ್ತದೆ, ಮಹರ್ಷಿ ವಾಲ್ಮೀಕಿಯವರು ಬಾಲ್ಯಾವಸ್ಥೆ, ಅವರು ಬೆಳೆದು ಬಂದ ಬಗೆ, ಕೊನೆಗೆ ರಾಮಾಯಣ ಗ್ರಂಥವನ್ನು ಬರೆದು ಮಹರ್ಷಿ ಆದ ಬಗೆಯನ್ನು ಹಾಗೂ ಅವರ ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಇದರಿಂದ ಜೀವನದ ಸಾರ್ಥಕತೆ ಪಡೆಯಲು ಸಾಧ್ಯವಿದೆ ಎಂದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ದಿನ ಮಾತ್ರ ಅವರನ್ನು ಸ್ಮರಣೆ ಮಾಡಿ ಉಳಿದಂತೆ ವರ್ಷವಿಡೀ ಅವರನ್ನು ಸ್ಮರಿಸದೇ ಇರಬಾರದು, ಅವರ ಮತ್ತು ಅವರ ಆದರ್ಶಗಳನ್ನು ನಿತ್ಯ ಮನನ ಮಾಡುವುದು ಒಳ್ಳೆಯದು, ಇದರಿಂದ ರಾಮಾಯಣದ ಕಥಾವಸ್ತುವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಾಧ್ಯವಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ , ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ ಹಾಗೂ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ. ಎಸ್. ಹನುಮಪ್ಪ ಮಾತನಾಡಿದರು. ಅಂತರ್ಜಾತಿ ವಿವಾಹವಾಗಿರುವ ತಾಲೂಕಿನ ವಿವಿಧ ದಂಪತಿಗಳಿಗೆ ಸರ್ಕಾರದ ಬಾಂಡ್‌ಗಳನ್ನು ವಿತರಿಸಲಾಯಿತು, ಹಾಗೆಯೇ ಕೃಷಿ ಇಲಾಖೆ ವತಿಯಿಂದ ಅರ್ಹ ರೈತ ಫಲಾನುಭವಿಗಳಿಗೆ ಕೃಷಿ ಚಟುವಟಿಕೆ ನಡೆಸಲು ವಿವಿಧ ಯಂತ್ರಗಳನ್ನು ಹಾಗೂ ನಗರಸಭೆ ವತಿಯಿಂದ ನಗರದ ವಿವಿಧ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ವೈದ್ಯಕೀಯ ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯ ಗಣೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಬಸವರಾಜ್, ತಾಲೂಕು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು,ಮೊದಲಾದವರಿದ್ದರು.