ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅನುಕರಣೆ ಅವಶ್ಯ: ಲಕ್ಷ್ಮಣರಾವ ಚಿಂಗಳೆ

| Published : Oct 18 2024, 12:01 AM IST

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅನುಕರಣೆ ಅವಶ್ಯ: ಲಕ್ಷ್ಮಣರಾವ ಚಿಂಗಳೆ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಮನುಷ್ಯನಾಗಿ ಬದುಕಲು ಮಹರ್ಷಿ ವಾಲ್ಮೀಕಿಯವರ ಆಚಾರ-ವಿಚಾರಗಳು ಅನುಸರಣೆ ಅಗತ್ಯವಾಗಿವೆ. ಇಂದಿನ ಯುವ ಸಮುದಾಯ‌ ವಾಲ್ಮೀಕಿಯವರ ತತ್ವಾದರ್ಶ ಅನುಸರಿಸುವುದರ ಮೂಲಕ ಸಧೃಡ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮನುಷ್ಯ ಮನುಷ್ಯನಾಗಿ ಬದುಕಲು ಮಹರ್ಷಿ ವಾಲ್ಮೀಕಿಯವರ ಆಚಾರ-ವಿಚಾರಗಳು ಅನುಸರಣೆ ಅಗತ್ಯವಾಗಿವೆ. ಇಂದಿನ ಯುವ ಸಮುದಾಯ‌ ವಾಲ್ಮೀಕಿಯವರ ತತ್ವಾದರ್ಶ ಅನುಸರಿಸುವುದರ ಮೂಲಕ ಸಧೃಡ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಜಿಲ್ಲಾ‌‌ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ‌ ಸಹಯೋಗದಲ್ಲಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಗುರುವಾರ ಜರುಗಿದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮಿಕಿ ಅವರು‌ ರಾಮಾಯಣ ರಚಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದು, ಅವರು ರಚಿಸಿದ ಇನ್ನೂ‌ ಅನೇಕ‌ ಸಾಹಿತ್ಯಗಳ ಕುರಿತು ಅಧ್ಯಯನವಾಗಬೇಕಾಗಿದೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಮಹನೀಯರ ಆಚಾರ ವಿಚಾರಗಳನ್ನು ಜೀವನದಲ್ಲಿ‌ ಅಳವಡಿಸಿಕೊಳ್ಳಬೇಕು. ಸಮಾಜ, ರಾಷ್ಟ್ರ‌ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತೀ‌ ಪ್ರಮುಖವಾದ ಪಾತ್ರ ವಹಿಸುತ್ತದೆ. ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದೆ. ಈ ಯೋಜ‌ನೆಗಳ ಸೌಲಭ್ಯ ಪಡೆದುಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಲು ಕರೆ ನೀಡಿದ‌ ಲಕ್ಷ್ಮಣರಾವ್ ಚಿಂಗಳೆ ಅವರು, ಮಹರ್ಷಿ ವಾಲ್ಕೀಕಿ ಅವರ ತತ್ವ ಸಿದ್ಧಾಂತ ಹಾಗೂ ವಿಚಾರಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಳಗಾವಿ ಉಪ ಮೇಯರ್‌ ಆನಂದ ಚವ್ಹಾಣ ಕಾರ್ಯಕ್ರಮ ಉದ್ಘಾಟಿಸಿದರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ‌ ಮಾತನಾಡಿ, ವಿಶ್ವಕ್ಕೆ ಮೊಟ್ಟ ಮೊದಲು ಮಹಾಕಾವ್ಯ ನೀಡಿದ ಸಮುದಾಯ ವಾಲ್ಮಿಕಿ ಸಮುದಾಯವಾಗಿದ್ದರೂ ಸಹ ನಮ್ಮ‌ ಸಮುದಾಯ ಸಮಾಜದ ಮುಂಚೂಣಿಗೆ ಬರಲಾಗುತ್ತಿಲ್ಲ. ಈ ಕುರಿತು ಆತ್ಮಾವಲೋಕನ‌ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಪುರಾಣ, ಚರಿತ್ರೆ ಕಾಲದಲ್ಲಿಯೂ ನಮ್ಮ‌‌ ಸಮುದಾಯವಿತ್ತು. ಜಗತ್ತಿನಲ್ಲಿ ಬೇಡರಂತಹ ಶೂರರಿಬಹುದು. ಆದರೆ, ಅವರನ್ನು ಮೀರಿಸುವಂತಹವರು ಯಾರು ಇಲ್ಲ ಎಂಬ ವಿಲಿಯಂ ಸೆಕ್ಸಪಿಯರ್ ಹೇಳಿದ್ದಾರೆ. ರಾಮಾಯಣ ಮಹಾಕಾವ್ಯ ಸಮೃದ್ಧವಾದ ಹಾಗೂ ಬುಡಕಟ್ಟು ಕಾವ್ಯವಾಗಿದೆ. ರಾಮಾಯಣದಲ್ಲಿ ಮನುಷ್ಯ, ವಾನರ ಹಾಗೂ ರಾಕ್ಷಸ ಲೋಕ ಪರಿಚಯಿಸಲಾಗಿದೆ. ವಾಲ್ಮಿಕಿ ಉತ್ತಮ‌ ಬಿಲ್ ವಿದ್ಯೆಗಾರ ಆಗಿದ್ದರು ಎಂದು ಅವರ ಜೀವನ ಹಾಗೂ ಬದುಕಿನ ಕುರಿತು ವಿವರಿಸಿದರು.

ರಾಮಾಯಣವನ್ನು ಬಿಡಿ ಬಿಡಿಯಾಗಿ ಓದುವುದರ ಮೂಲಕ‌ ವಾಲ್ಮಿಕಿ ರಾಮಾಯಣಕ್ಕೆ ಧಕ್ಕೆ ತರುವ ಕಾರ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಡಾ.ಬಿ.ಆರ್‌.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೂಲಕ ನಮ್ಮ‌ ಹಕ್ಕು ಪಡೆಯಬಹುದಾಗಿದೆ. ಜಯಂತಿಗಳ‌ ಸಂದರ್ಭದಲ್ಲಿ ಪ್ರತಿಯೊಬ್ಬರು ಸುಶಿಕ್ಷತರಾಗುವ ಸಂಕಲ್ಪ ತೋಡಬೇಕಾಗಿದೆ. ಜ್ಞಾನ, ಶಿಕ್ಷಣ ಹಾಗೂ ಸಂಘಟನೆ ಮೂಲಕ ಗುರಿ ತಲುಪಬಹುದಾಗಿದ್ದು, ಎಲ್ಲ ಮಹಿಳೆಯರಿಗೂ ಉತ್ತಮ ಶಿಕ್ಷಣ‌ ನೀಡುವುದರ‌ ಮೂಲಕ ಸಮಾಜ ಹಾಗೂ ರಾಷ್ಟ್ರವನ್ನು ಸದೃಢ ಮಾಡಬಹುದಾಗಿದೆ. ಡಾ.ಬಿ.ಆರ್. ಅಂಬೇಡ್ಕರ ರಚಿಸಿದಂತಹ‌ ಸಂವಿಧಾನ ಶಕ್ತಿಶಾಲಿಯಾಗಿದ್ದು, ಸಂವಿಧಾನದ ಬೆಳಕಿನಲ್ಲಿ ಎಲ್ಲ‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಮಾಜದ ಮುಖಂಡ ಯಲ್ಲಪ್ಪ‌ ಕೊಲೇಕರ ಮಾತನಾಡಿ, ವಾಲ್ಮೀಕಿ ಸಮಾಜ ಧೈರ್ಯಕ್ಕೆ ಹೆಸರುವಾಸಿಯಾದ ಹಾಗೂ ಕೊಟ್ಟ ಮಾತನ್ನು ನಡೆಸಿ ಕೊಡುವಂತಹ ಸಮುದಾಯವಾಗಿದೆ. ಕಿತ್ತೂರು ರಾಣಿ ಚನ್ನಮ್ಮಾಜಿಗೆ ಕುದುರೆ ಸವಾರಿ ಕಲಿಸಿರುವುದು ನಮ್ಮ ವಾಲ್ಕೀಕಿ ಸಮುದಾಯವಾಗಿದೆ ಎಂದು‌ ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಮಾತನಾಡಿ, ಸಮಾಜದಲ್ಲಿ ಸಮುದಾಯವನ್ನು ಮುಂಚೂಣಿಗೆ ತರುವಲ್ಲಿ‌ ಶಿಕ್ಷಣದ ಪಾತ್ರ ಮಹತ್ವದಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣ‌ ಪಡೆಯುವಂತೆ ತಿಳಿಸಿದರು.

ಪ್ರತಿಭಾವಂತರಿಗೆ ಸನ್ಮಾನ: ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪಿಯುಸಿ ವಾರ್ಷಿಕ‌ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ, ಪಿ.ಎಚ್.ಡಿ‌. ಪದವಿ‌ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗಣ್ಯರು ಸತ್ಕರಿಸಿ ಗೌರವಿಸಿದರು.

ನಗರ ಸೇವಕರು, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ‌ ದುಡಗುಂಟಿ, ಜಿಪಂ.ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ, ಸಾಹಿತಿಗಳಾದ ಸರಜೂ ಕಾಟ್ಕರ್‌, ಮಲ್ಲೇಶಿ ಚೌಗುಲೆ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು, ಗಣ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ವಿಧ್ಯಾರ್ಥಿಗಳು ಇದ್ದರು.

ಜಿಲ್ಲಾ‌ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ ಸ್ವಾಗತಿಸಿ,‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ‌‌ ಮೊರೆ‌ ಹಾಗೂ ತಂಡದವರು ನಾಡಗೀತೆ ಪ್ರಸ್ತುತಿಸಿದರು.

ಬಾಕ್ಸ್‌..

ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ:

ಮಹರ್ಷಿ ವಾಲ್ಮಿಕಿ‌ ಜಯಂತಿ ಪ್ರಯುಕ್ತ ಜರುಗಿದ‌ ಮೆರವಣಿಗೆಗೆ ಜಿಲ್ಲಾಧಿಕಾರಿ‌‌ ಮೊಹಮ್ಮದ್ ರೋಷನ್ ಅವರು ನಗರದ ಕೋಟೆ ಆವರಣದಲ್ಲಿ ಚಾಲನೆ ನೀಡಿದರು. ಮಹರ್ಷಿ ವಾಲ್ಮಿಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಪ್ರಾರಂಭವಾದ ಮೆರವಣಿಗೆಯು ಕೋಟೆ ಕೆರೆ, ಅಶೋಕ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಗೆ ಪೂರ್ಣ ಕುಂಬಹೊತ್ತ ಮಹಿಳೆಯರು ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರಗು ತಂದವು.

ಪೊಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ನಬ್ಯಾಂಗ್, ಜಿಲ್ಲಾ‌ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ‌ ಪಂಚಾಯತ ಸಿಇಒ ರಾಹುಲ‌ ಶಿಂಧೆ, ಜಿಲ್ಲಾ‌ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಇದ್ದರು.