ಭಟ್ಕಳ ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆ ಶುಕ್ರವಾರ ಹಾಲಹಬ್ಬದ ಸೇವೆಯೊಂದಿಗೆ ವಿಜೃಂಭಣೆಯಿಂದ ಆರಂಭಗೊಂಡಿತು. ಜಾತ್ರೆಯ ಪ್ರಯುಕ್ತ ಶುಕ್ರವಾರ ಬೆಳಗ್ಗೆ ದೇವಸ್ಥಾನದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭಟ್ಕಳ: ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆ ಶುಕ್ರವಾರ ಹಾಲಹಬ್ಬದ ಸೇವೆಯೊಂದಿಗೆ ವಿಜೃಂಭಣೆಯಿಂದ ಆರಂಭಗೊಂಡಿತು.
ಜಾತ್ರೆಯ ಪ್ರಯುಕ್ತ ಶುಕ್ರವಾರ ಬೆಳಗ್ಗೆ ದೇವಸ್ಥಾನದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಮಹಾಸತಿ ದೇವಿಯವರಿಗೆ ಜಾತ್ರಾ ಪ್ರಯುಕ್ತ ಪ್ರಥಮ ಪೂಜೆ ಸಲ್ಲಿಸಲಾಯಿತು. ಆನಂತರ ದೇವಿಯ ದರ್ಶನ ಮತ್ತು ಪೂಜೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಇ.ಎಚ್. ಹಾಗೂ ಸಮಿತಿಯ ಪದಾಧಿಕಾರಿಗಳು, ಊರ ನಾಗರಿಕರು ಉಪಸ್ಥಿತರಿದ್ದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಜ. 24ರಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕೆಂಡಸೇವೆ ನಡೆಯಲಿದೆ. ಕೆಂಡ ಸೇವೆಯಲ್ಲಿ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರೂ ಪಾಲ್ಗೊಂಡು ತಮ್ಮ ಹರಕೆ ತೀರಿಸುತ್ತಾರೆ. ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಗದಂತೆ ತಡೆಯಲು ಮತ್ತು ಜಾತ್ರೆಗೆ ಆಗಮಿಸಿದ ಭಕ್ತರಿಗೆ ತ್ವರಿತವಾಗಿ ದೇವಿಯ ದರ್ಶನ ಮತ್ತು ಪೂಜೆಗೆ ಅಭಿವೃದ್ಧಿ ಸಮಿತಿ ಮತ್ತು ಕಂದಾಯ ಇಲಾಖೆ ಸಕಲ ವ್ಯವಸ್ಥೆ ಮಾಡಿದೆ.ಸೋಡಿಗದ್ದೆ ಮಹಾಸತಿ ದೇವಸ್ಥಾನ ಭಕ್ತರ ಪಾಲಿನ ನಂಬಿಕೆಯ ದೇವಸ್ಥಾನ ಆಗಿದೆ. ವರ್ಷಂಪ್ರತಿ ಸೋಡಿಗದ್ದೆ ಜಾತ್ರೆಯಲ್ಲಿ ಸ್ಥಳೀಯರು ಹಾಗೂ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ದೇವಿಗೆ ಪೂಜೆ-ಪುನಸ್ಕಾರ ಸಲ್ಲಿಸುತ್ತಾರೆ. ಸೋಡಿಗದ್ದೆ ಜಾತ್ರೆಯಲ್ಲಿ ತುಲಾಭಾರ ಸೇವೆಯೂ ನಡೆಯಲಿದ್ದು, ಜಾತ್ರೆ ಜನವರಿ ೩೧ರ ವರೆಗೂ ನಡೆಯಲಿದೆ. ಜಾತ್ರಾ ಪ್ರಯುಕ್ತ ಪ್ರತಿ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ. ಸಂಜೆ ಮತ್ತು ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಮತ್ತು ಯಕ್ಷಗಾನ ಮುಂತಾದವು ನಡೆಯಲಿದೆ.