ಅವಳಿ ಜಿಲ್ಲೆಗಳಲ್ಲಿ ಮಹಾಶಿವರಾತ್ರಿಯ ಸಂಭ್ರಮ

| Published : Mar 09 2024, 01:30 AM IST

ಅವಳಿ ಜಿಲ್ಲೆಗಳಲ್ಲಿ ಮಹಾಶಿವರಾತ್ರಿಯ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ, ನಂದಿ, ಚಿಂತಾಮಣಿ, ಗೌರಿಬಿದನೂರು, ಕೈವಾರ,ಈಶ ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಶಿವ-ಪಾರ್ವತಿ, ಈಶ್ವರ ಹಾಗೂ ಇನ್ನಿತರ ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದ್ಯಾಂತ ಮಹಾಶಿವರಾತ್ರಿ ಸಂಭ್ರಮ ಜೋರಾಗಿದ್ದು, ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸಂಭ್ರಮದಿಂದ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಎಲ್ಲಾ ಶಿವನ ದೇವಾಲಯಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು.

ಮುಂಜಾನೆಯಿಂದಲೇ ದೇವಾಲಯಗಳತ್ತ ತೆರಳಿದ ಭಕ್ತರು, ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ, ನಂದಿ, ಚಿಂತಾಮಣಿ, ಗೌರಿಬಿದನೂರು, ಕೈವಾರ,ಈಶ ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಶಿವ-ಪಾರ್ವತಿ, ಈಶ್ವರ ಹಾಗೂ ಇನ್ನಿತರ ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಭೋಗನಂದೀಶ್ವರನಿಗೆ ವಿಶೇಷ ಪೂಜೆ:

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ತಾಲೂಕಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆಗಳು ನಡೆದವು. ಭೋಗನಂದೀಶ್ವರನಿಗೆ ಏಕವಾರ ಅಭಿಷೇಕ, ಕ್ಷೀರಾಭಿಷೇಕ, ತುಪ್ಪಾಭಿಷೇಕ, ಗಂಧಾಬಿಷೇಕ, ಪುಷ್ಪಾಭಿಷೇಕ ನಡೆಯಿತು. ಹಾಗೆಯೇ ದೇವಾಲಯದ ಆವರಣದಲ್ಲಿ ಮಹಿಳೆಯರು ದೀಪಗಳನ್ನು ಬೆಳಗಿ ಹರಿಕೆ ತೀರಿಸಿಕೊಂಡರು.

ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ ಜಿಲ್ಲೆ ಹಾಗೂ ಪಕ್ಕದ ಆಂಧ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲದೆ, ಸಾಲಾಗಿ ನಿಂತು ಭೋಗನಂದೀಶ್ವರನ ದರ್ಶನವನ್ನು ಕೂಡ ಪಡೆದರು. ದೇವಾಲಯದ ಒಳಗಡೆಯಿರುವ ಬೃಹತ್ ಕಲ್ಯಾಣಿಯಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನೆರೆವೇರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ ಕಾರಣ, ಇದನ್ನು ನಿಭಾಯಿಸಲು ಪೊಲೀಸ್, ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು. ವಾಹನಗಳ ದಟ್ಟಣೆ ಹೆಚ್ಚಾದ್ದಗಿದ್ದರಿಂದ ನಂದಿಯಿಂದ ಚಿಕ್ಕಬಳ್ಳಾಪುರ ರಸ್ತೆಯ ಅರ್ಧ ಕಿಲೋ ಮೀಟರ್‌ ದೂರದಲ್ಲಿ ಹಾಗೂ ಹೆದ್ದಾರಿ ಕಡೆ ಅರ್ಧ ಕಿಮೀ. ದೂರದಲ್ಲಿ ಪ್ರತ್ಯೇಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದಲ್ಲಿ ವಿವಿಧ ಕಲಾ ತಂಡಗಳಿಂದ ಭಜನೆ, ಸಂಗೀತ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಂದಿ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದ ವಿನಿಯೋಗವೂ ನಡೆಯಿತು.

ಜೋಡಿ ಬ್ರಹ್ಮ ರಥೋತ್ಸವಕ್ಕೆ ಸಿದ್ದತೆ:

ನಂದಿ ಗ್ರಾಮದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಆವರಣದಲ್ಲಿ ಭೋಗನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆಯ ಮರುದಿನ ಶನಿವಾರ ಶಿವ-ಪಾರ್ವತಿ ಹಾಗೂ ಗಣೇಶ ಮೂರ್ತಿಗಳ ಜೋಡಿ ರಥೋತ್ಸವ ನಡೆಯುವುದು ವಾಡಿಕೆ. ಜೋಡಿ ರಥೋತ್ಸವಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜೋಡಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಭಾವ ಮೆರೆಯುವ ನಿರೀಕ್ಷೆಯಿದೆ.

ಚಿಕ್ಕಬಳ್ಳಾಪುರ ನಗರ ಎಂ.ಜಿ. ರಸ್ತೆಯ ಶ್ರೀ ಮರಳು ಸಿದ್ಧೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯಿತು. ದೇವಾಲಯ ಸೇವಾ ಸಮಿತಿ ಹಾಗೂ ಭಕ್ತಾಗಳಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹಮ್ಮಿಕೊಂಡಿದ್ದ ಉತ್ಸವದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿಶೇಷ ಪೂಜೆ, ಅಭಿಷೇಕ, ಗಣಪತಿ ಪೂಜೆ, ಮಹಾಗಣಪತಿ ಪುರಸರ ನವಗ್ರಹ ಹೋಮ, ಸುದರ್ಶನ ಹೋಮ, ಮಹಾಪೂರ್ಣಾಹುತಿ ಅಲಂಕಾರ ಮಹಾ ಮಂಗಳಾರತಿ ಸೇರಿ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮಹಿಳೆಯರು, ಮಕ್ಕಳು, ಕುಟುಂಬ ಸಮೇತರಾಗಿ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ನಗರದ ಚಂದ್ರ ಮೌಳೇಶ್ವರ(ಶಿವ)ದೇವಾಲಯ, ಕಂದವಾರದ ಎದುರು ಲಿಂಗೇಶ್ವರ(ರಾಮ ಮತ್ತು ಭೀಮ ಲಿಂಗೇಶ್ವರ)ಗಳಲ್ಲಿಯೂ ಸಹ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ,ಹೋಮಗಳನ್ನು ಏರ್ಪಡಿಸಲಾಗಿತ್ತು.

ಆದಿಯೋಗಿ ದರ್ಶನಕ್ಕೆ ಆಗಮಿಸಿದ್ದ ಭಕ್ತರ ದಂಡು:

ತಾಲೂಕಿನ ಅಗಲಗುರ್ಕಿ ಸಮೀಪದ ಈಶ ಕೇಂದ್ರದ ಆದಿಯೋಗಿ ದರ್ಶನ ಪಡೆಯಲು ಅಪಾರ ಜನರು ಆಗಮಿಸಿದ್ದರು. ಯೋಗ ಲಿಂಗೇಶ್ವರ ದೇವರಿಗೆ ದೀಪ ಬೆಳಗಿಸುವ ಮತ್ತು ಜಲಾಭಿಷೇಕ ಮಾಡಲು ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈಶ ಕೇಂದ್ರಕ್ಕೆ ತಲುಪಲು ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಹಾಗೆಯೇ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ನವ ಧಾನ್ಯಗಳಿಂದ ಶಿವಲಿಂಗ ಮೂರ್ತಿಗಳನ್ನು ಸ್ಥಾಪಿಸಲಾಗಿತ್ತು.