ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳೆದ 5 ದಿನಗಳಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಲವು ವಿಶೇಷತೆಗಳೊಂದಿಗೆ ಶನಿವಾರ ಬೆಳಗ್ಗೆ ಮಹಾ ರಥೋತ್ಸವ 8.10 ರಿಂದ 8.45 ರವರೆಗೆ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ಉಪಸ್ಥಿತಿಯಲ್ಲಿ ಮಹಾಶಿವರಾತ್ರಿ ಮಹಾ ರಥೋತ್ಸವ ಸಂಭ್ರಮದಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹರ್ಷೋದ್ಗಾರದೊಂದಿಗೆ ಸಂಪನ್ನಗೊಂಡಿತು.ಮಹಾರಥೋತ್ಸವ ವಿಶೇಷತೆ:
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಪ್ರತಿವರ್ಷದಂತೆ ಸಾಂಪ್ರದಾಯದಂತೆ ಮಹಾರಥೋತ್ಸವಕ್ಕೂ ಮುನ್ನ ಬೆಳಗ್ಗೆ 7ಕ್ಕೆ ಕೆಂಪು ಅನ್ನ ತಯಾರಿಸಿ ಅನ್ನ (ಬಲಿ ಅನ್ನ) ಮಲೆಮಹದೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಬೇಡರ ಸ್ವಾಮಿಗಳ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ರಥದ ಚಕ್ರಗಳಿಗೆ ಬಲಿ ಅನ್ನ ಇಟ್ಟು ನಂತರ ಮಹಾ ಮಂಗಳಾರತಿ ಪೂಜೆ ಸಲ್ಲಿಸಿ ಬೆಲ್ಲದ ಆರತಿ, ಬೂದುಗುಂಬಳಕಾಯಿ ಒಡೆದ ನಂತರ ಸ್ವಾಮೀಜಿ ತೆಂಗಿನಕಾಯಿ ಒಡೆಯುವ ಮೂಲಕ ಮಹಾರಥೋತ್ಸವಕ್ಕೆ ಸಾಂಪ್ರದಾಯದಂತೆ ಚಾಲನೆ ನೀಡಲಾಯಿತು.ಡ್ರೋಣ್ ಕ್ಯಾಮೆರಾದಲ್ಲಿ ವೈಭವ ಕಣ್ತುಂಬಿಕೊಂಡ ಭಕ್ತಗಣ:
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೆರೆದಿದ್ದ ಭಕ್ತ ಸಮೂಹ ಹಾಗೂ ರಥೋತ್ಸವದ ದೃಶ್ಯವನ್ನು ಡ್ರೋಣ್ ಕ್ಯಾಮರದಲ್ಲಿ ಸೆರೆ ಹಿಡಿಯುವ ಮೂಲಕ ಮಹಾರಥೋತ್ಸವದ ವೈಭವವನ್ನು ಭಕ್ತ ಸಮೂಹ ಕಣ್ತುಂಬಿಕೊಂಡಿಂತು.ಬಿಳಿ ಆನೆ ಉತ್ಸವ:
ಮಹಾರಥೋತ್ಸವ ನಂತರ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಆವರಣದಲ್ಲಿ ಪ್ರದಕ್ಷಣೆ ಹಾಕಿ ನಂತರ ಹೊರಭಾಗದದಲ್ಲೂ ಸಹ ವಾದ್ಯಗಳೊಂದಿಗೆ ಪ್ರದಕ್ಷಣೆ ಹಾಕಿ ಉತ್ಸವ ಮೂರ್ತಿಯನ್ನು ಪೂಜೆ ಸಲ್ಲಿಸಿ ಮಹಾ ಮಂಗಳಾರತಿಯೊಂದಿಗೆ ಪೂಜೆಯ ನಂತರ ಬಿಳಿ ಆನೆ ಉತ್ಸವ ನಡೆಸಲಾಯತು.ಗುರು ಬ್ರಹ್ಮೋತ್ಸವ :
ಮಹದೇಶ್ವರ ಉತ್ಸವ ಮೂರ್ತಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟ್ಯಾಕ್ಟರ್‌ನಲ್ಲಿ ಇರುವ ಪಲ್ಲಕಿಯಲ್ಲಿ ಇಟ್ಟು ಗುರು ಬ್ರಹ್ಮೋತ್ಸವ ಉತ್ಸವ ಮೂರ್ತಿಯನ್ನು ವಾದ್ಯಗಳ ಹಾಗೂ ವೀರಗಾಸೆ ಕತ್ತಿ ವರಸೆ ನವಿಲೂರು ವಾದ್ಯ ಮೇಳೆಗಳ ಜೊತೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ನಂತರ ಉತ್ಸವ ಮೂರ್ತಿಗೆ ಧೂಪದ ಅಭಿಷೇಕ ಬಿಲ್ವಾರ್ಚನೆ, ಅಭಿಷೇಕ ಮಹಾಮಂಗಳಾರತಿ ನಂತರ ವಿಶೇಷ ಪೂಜೆ ಸಲ್ಲಿಸುವ ಈ ಸನ್ನಿವೇಶವನ್ನು ಮಾದಪ್ಪನ ಭಕ್ತರು ಕಣ್ತುಬಿಕೊಂಡರು.ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 5 ದಿನಗಳಿಂದ ಮಹಾಶಿವರಾತ್ರಿ ಜಾತ್ರೆ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ದೀಪಾಲಂಕಾರ ಮೂಲಕ ಭಕ್ತ ಸಮೂಹವನ್ನು ತನ್ನತ್ತ ಸೆಳೆಯುವಂತೆ ಮಾಡಲಾಗಿತ್ತು. ಈ ಜಾತ್ರೆಯಲ್ಲಿ ಕ್ಷೇತ್ರಕ್ಕೆ ಕಳೆದ ಒಂದು ವಾರದಿಂದ 6 ಲಕ್ಷಕ್ಕೂ ಹೆಚ್ಚು ಅಧಿಕ ಮಾದಪ್ಪನ ಭಕ್ತಾದಿಗಳು ಭೇಟಿಕೊಟ್ಟು ದೇವರ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಭಕ್ತರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರಂತರ ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ 6 ಲಕ್ಷಕ್ಕೂ ಅಧಿಕ ಲಾಡು ಪ್ರಸಾದ ಮಾರಾಟ ಮಾಡಲಾಗಿದೆ. ರಾಜ್ಯ ಸೇರಿದಂತೆ ತಮಿಳುನಾಡು ಭಾಗದಿಂದಲೂ ಲಕ್ಷಾಂತರ ಮಂದಿ ಮಾದಪ್ಪನ ಭಕ್ತರು ಶನಿವಾರ ನಡೆದ ಮಹಾ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಇಡೀ ಕ್ಷೇತ್ರದಲ್ಲಿ ಮಾದಪ್ಪನ ಜಯ ಘೋಷಣೆ ಮಾರ್ಧನಿಸಿತು.
ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಡಿವೈಎಸ್ಪಿ ಧರ್ಮೇಂದರ್ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ದೇವಾಲಯದ ಆಡಳಿತ ವರ್ಗದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಾತ್ರೆಯಲ್ಲಿ ಯಾವುದೇ ಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಕಲ್ಪಿಸುವ ಮೂಲಕ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಮೂಲಕ ಮಾದಪ್ಪನ ದರ್ಶನ ಪಡೆದು ಪುನೀತರಾಗಿದ್ದಾರೆ. ಶನಿವಾರ ನಡೆದ ರಥೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಭಕ್ತಾಧಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.-ಎ.ಇ.ರಘು, ಕಾರ್ಯದರ್ಶಿ, ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.