ಸಾರಾಂಶ
ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಭಕ್ತರು ಸಂಭ್ರಮ ಸಡಗರದಿಂದ ಬುಧವಾರ ಮಹಾಶಿವರಾತ್ರಿ ಆಚರಿಸಿದರು. ಹಬ್ಬದ ಅಂಗವಾಗಿ ಶಿವಮೊಗ್ಗದ ಶಿವನ ದೇವಾಲಯಗಳಲ್ಲಿ ಭಕ್ತಸಾಗರವೇ ನೆರೆದಿತ್ತು.
ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು. ವಿಶೇಷವಾಗಿ ಶಿವನ ದೇವಾಲಯಗಳನ್ನು ಬಣ್ಣದ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ಹರಕೆರೆಯ ಶಿವನ ದೇವಸ್ಥಾನದಲ್ಲಿ ಮುಂಜಾನೆ ಶಿವನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳ ವೈಭವ ಜರುಗಿತು. ವಿಶೇಷ ಪೂಜೆ, ಪುನಸ್ಕಾರ ಮತ್ತು ಬಿಲ್ವ ಪತ್ರೆ, ತುಂಬೆ ಅರ್ಪಣೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಭಕ್ತರಿಗೆ ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿ ತುಂಗಾ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಬಳಿಕ ಶಿವನ ದರ್ಶನ ಮಾಡಿದರು.ಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ರಸ್ತೆಯಲ್ಲಿ ಹಗ್ಗಕಟ್ಟಿ ಸಾಲಿನಲ್ಲಿ ಶಿವನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಭಕ್ತರು ಬಿಸಿಲನ್ನು ಲೆಕ್ಕಿಸದೆ ಉದ್ದದ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಅದೇ ರೀತಿ ನಗರದ ಎಲ್ಲ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂದಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶಿವನ ದೇಗುಲಗಳಲ್ಲದೆ ಎಲ್ಲ ದೇವಾಲಯಗಳಲ್ಲಿ ಬೆಳಿಗಿನಿಂದಲೇ ವಿಶೇಷ ಪೂಜೆ ಅಭಿಷೇಕ ನಡೆಯಿತು.ವಿನೋಬ ನಗರದ ಶಿವನ ದೇವಾಲಯದಲ್ಲಿ ವಿಶೇಷವಾಗಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಗುಂಪು ಗುಂಪಾಗಿ ಪೂಜೆಗೆ ಬರುತ್ತಿರುವ ದೃಶ್ಯ ಕಂಡುಬಂತು. ಮಹಿಳೆಯರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧಾಭಕ್ತಿಯಿಂದ ಶಿವನ ಆರಾಧಿಸುವ ದೃಶ್ಯ ಸಾಮಾನ್ಯವಾಗಿತ್ತು.
ಅಬ್ಬಲಗೆರೆ ಸಮೀಪದ ಈಶ್ವರವನದಲ್ಲಿ ವನದ ಮುಖ್ಯಸ್ಥ ಎಂ.ವಿ.ನಾಗೇಶ್ ನೇತೃತ್ವದಲ್ಲಿ ವಿಶೇಷ ಶಿವರಾತ್ರಿ ಆಚರಿಸಲಾಯಿತು. ಕೋಟೆ ಭೀಮೇಶ್ವರ ದೇವಾಲಯದಲ್ಲಿ ವಿಶೇಷವಾಗಿ ಶಿವನ ಪೂಜೆ ಜರುಗಿತು. ಬೆಳಿಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಈಶ್ವರನ ದರ್ಶನ ಪಡೆದು ಪುನೀತರಾದರು. ನದಿಯ ದಂಡೆಯ ಮೇಲೆ ಈಶ್ವರ ದೇವಾಲಯ ಇರುವುದು ಇಲ್ಲಿನ ವಿಶೇಷವಾಗಿದೆ. ಭಕ್ತರಿಗೆ ಪಾನಕ ಮತ್ತು ಕೋಸಂಬರಿ ಹಂಚಲಾಯಿತು.ವೀರಶೈವ ಕಲ್ಯಾಣ ಮಂದಿರದ ಶಿವನ ದೇವಾಲಯ, ಜೈಲ್ ಆವರಣದಲ್ಲಿರುವ ಉಮಾ ಮಹೇಶ್ವರ, ಬಸವನಗುಡಿಯ ಈಶ್ವರ ದೇವಾಲಯ, ರವೀಂದ್ರ ನಗರದ ಶಿವನ ಮೂರ್ತಿ, ತುಂಗಾ ತೀರದ ಅರಕೇಶ್ವರ ದೇವಾಲಯ, ಗಾಂಧಿ ಬಜಾರಿನ ಬಸವೇಶ್ವರ ದೇವಾಲಯ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯ, ಬಿ.ಎಚ್.ರಸ್ತೆಯ ಮೈಲಾರೇಶ್ವರ, ಬಿ.ಬಿ.ರಸ್ತೆಯ ಭವಾನಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಆಯೋಜಿಸಲಾಗಿತ್ತು.
ಬಸವನಗುಡಿ ಶೈಲಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮೊದಲಾದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ ಸೇರಿ ವಿವಿಧ ಕಾರ್ಯಕ್ರಮ ನಡೆದವು.ಹಬ್ಬದ ಅಂಗವಾಗಿ ಕಲ್ಲಂಗಡಿ ಹಣ್ಣು, ಬನಸ್ಪತ್ರೆ, ಕರಬೂಜ ಮೊದಲಾದ ಹಣ್ಣುಗಳ ಖರೀದಿ ಜೋರಾಗಿತ್ತು. ಇವುಗಳೊಂದಿಗೆ ಹೂವು, ಪೂಜಾ ಸಾಮಗ್ರಿ ಹಾಗೂ ವಿವಿಧ ಹಣ್ಣುಗಳ ಮಾರಾಟವೂ ಜೋರಾಗಿತ್ತು.
ಈಶ್ವರ ವನದಲ್ಲಿ ರಕ್ತದಾನ ಶಿಬಿರಶಿವಮೊಗ್ಗ: ಮಹಾಶಿವರಾತ್ರಿ ಅಂಗವಾಗಿ ಬುಧವಾರ ನವ್ಯಶ್ರೀ ಈಶ್ವರ ವನ ಅಬ್ಬಲೆಗೆರೆಯಲ್ಲಿ. ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭಾರತೀಯ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ರೋಟರಿ ಮಿಡ್ ಟೌನ್ ರಕ್ತ ನಿಧಿ. ಸಹಯೋಗದೊಂದಿಗೆ ಆಯೋಜಿಸನಾದ ರಕ್ತದಾನ ಶಿಬಿರದಲ್ಲಿ ಈಶ್ವರನ ಭಕ್ತರು, ನವ್ಯಶ್ರೀ ಟ್ರಸ್ಟಿನ ಪದಾಧಿಕಾರಿಗಳು, ಸಾರ್ವಜನಿಕರು ರಕ್ತದಾನ ಮಾಡಿ ಶಿವನ ಆಶೀರ್ವಾದ ಪಡೆದರು.ಇದೇ ವೇಳೆ ಉಚಿತವಾಗಿ ರಕ್ತದ ಗುಂಪು ತಪಾಸಣೆ ಮತ್ತು ಹಿಮೋಗ್ಲೋಬಿನ್ ತಪಾಸಣೆ ನಡೆಸಲಾಯಿತು. ರಕ್ತದಾನಿಗಳಿಗೆ ನವ್ಯಶ್ರೀ ನಾಗೇಶ್ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ.ಎಸ್.ಕೆ., ಹಿರಿಯ ಸಂಚಾಲಕ ಅಧಿಕಾರಿ ಹಾಗೂ ರಕ್ತದಾನಿ ಧರಣೇಂದ್ರ ದಿನಕರ್, ವೈದ್ಯಾಧಿಕಾರಿ ಡಾ.ಎಸ್.ದಿನಕರ್, ಲಕ್ಷ್ಮಿ, ನವ್ಯಶ್ರೀ ನಾಗೇಶ್, ಪ್ರದೀಪ್ ಉಪಸ್ಥಿತರಿದ್ದರು.