ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶನಿವಾರ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಹಲವು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮುಂಜಾನೆ ಪ್ರಸಾದ ವಿನಿಯೋಗ ನಡೆಯಿತು. ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತಗಣ ಭಕ್ತಿಯ ಸಿಂಚನದಲ್ಲಿ ಮಿಂದೆದ್ದರು.
ಸಾಂಪ್ರದಾಯಿಕ ಭೋಜನಕ್ಕೆ ವ್ಯವಸ್ಥೆ:ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತಲ್ಲದೆ, ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮುದ್ದೆ, ಅವರೇಕಾಳು ಕೂಟನ್ನು ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು. ಚೈತನ್ಯ ವಾಯುವಿಹಾರಿಗಳ ಬಳಗ ಸಾಂಪ್ರದಾಯಿಕ ಭೋಜನಕ್ಕೆ ಉತ್ತೇಜನ ನೀಡಿದ್ದು ವಿಶೇಷವಾಗಿತ್ತು.
ನಗರದ ಹೊಸಹಳ್ಳಿ ಬಡಾವಣೆಯ ಶ್ರೀ ಶನೇಶ್ವರ ದೇವಾಲಯ, ಶಂಕರಪುರ ಶ್ರೀ ಶನೇಶ್ವರ ದೇವಾಲಯ, ಉದಯಗಿರಿ ಶ್ರೀ ಶನೇಶ್ವರ, ಕಲ್ಲಹಳ್ಳಿಯ ಶ್ರೀ ಮಲೈಮಹದೇಶ್ವರ, ನೆಹರು ನಗರದ ಶ್ರೀ ರಾಮ ಸಭಾ ವತಿಯಿಂದ ವಿಶೇಷ ಪೂಜೆ, ರಾಗಿಮುದ್ದನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಶ್ರೀ ಶನೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.ತಾಲೂಕಿನ ಹೊಳಲು ಗ್ರಾಮದಲ್ಲಿರುವ ಶ್ರೀ ತಾಂಡವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಪೂರ್ತಿ ಜಾಗರಣೆ ಪ್ರಯುಕ್ತ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದರೆ, ತಾಲೂಕಿನ ಮಂಗಲ ಗ್ರಾಮದ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸಲಾಯಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಮಂದಿ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಪಂಚಲಿಂಗೇಶ್ವರ ಉತ್ಸವ:ತಾಲೂಕಿನ ಕೆರಗೋಡು ಗ್ರಾಮದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಉತ್ಸವ ನಡೆಯಿತು. ಶಾಸಕ ಪಿ. ರವಿಕುಮಾರ್ ಗಣಿಗ ಮತ್ತು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಇದರೊಂದಿಗೆ ಜಿಲ್ಲೆಯ ಹಲವು ದೇವಾಲಯಗಳಲ್ಲೂ ಪೂಜಾ ಕೈಂಕರ್ಯದ ಜೊತೆಗೆ ಪ್ರಸಾದ ವಿತರಣೆಯನ್ನು ಏರ್ಪಡಿಸಲಾಗಿತ್ತು. ಭಕ್ತರು ಈ ಕಾರ್ಯದಲ್ಲಿ ಭಾಗವಹಿಸಿ ಭಕ್ತಿ ಭಾವವವನ್ನು ಮೆರೆದರು.