ಅರಸಿನಕುಪ್ಪೆ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಸಂಪನ್ನ

| Published : Mar 01 2025, 01:01 AM IST

ಅರಸಿನಕುಪ್ಪೆ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಲಿಂಗಪುರದ ಅರಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ.೨೬ ಮತ್ತು ೨೭ರಂದು ಮಹಾಶಿವರಾತ್ರಿ ಆಚರಿಸಲಾಯಿತು. ಶಿವರಾತ್ರಿ ಜಾತ್ರೋತ್ಸವ ಕ್ಷೇತ್ರದ ಗುರುಗಳಾದ ರಾಜೇಶನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ, ಅರ್ಚಕ ಜಗದೀಶ ಉಡುಪ ಅವರ ಪೌರೋಹಿತ್ಯದಲ್ಲಿ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ.೨೬ ಮತ್ತು ೨೭ರಂದು ಮಹಾಶಿವರಾತ್ರಿ ಆಚರಿಸಲಾಯಿತು.ಫೆ.೨೬ರಂದು ಬೆಳಗ್ಗೆ ೫ ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಕ್ಷೇತ್ರದ ಗುರುಗಳಾದ ರಾಜೇಶನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ, ಅರ್ಚಕ ಜಗದೀಶ ಉಡುಪ ಅವರ ಪೌರೋಹಿತ್ಯದಲ್ಲಿ ಆರಂಭವಾಯಿತು. ನಂತರ ಬೆಳಗ್ಗೆ ೬ ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಿತು. ನಂತರ ಪ್ರತಿ ಮೂರು ಗಂಟೆಗೆ ಎಳನೀರು ಅಭಿಷೇಕ, ಕಬ್ಬಿನ ಹಾಲಿನಾಭಿಷೇಕ, ಪಂಚಾಮೃತ, ಜೇನು ತುಪ್ಪದ ಅಭಿಷೇಕ, ಕೊನೆಗೆ ಭಸ್ಮಾಭಿಷೇಕ ನಡೆಯಿತು.

ಪ್ರತಿಯಾಮದಲ್ಲೂ ಏಕದಶಾವರ ರುದ್ರಾಭಿಷೇಕ ನೆಡೆಯಿತು. ಫೆ.೨೭ರಂದು ಬೆಳಗ್ಗೆ ಬೆಂಗಳೂರಿನ ಅರ್ಚಕ ಸೋಮನಾಥ್ ಹೊಳ್ಳ ರುದ್ರಹೋಮ ನಡೆಸಿಕೊಟ್ಟರು. ೯.೩೦ಕ್ಕೆ ಕಲಶಾಭಿಷೇಕ ನಂತರ ೧೦ ಗಂಟೆಗೆ ಪ್ರಯಾಗ್‌ರಾಜ್‌ನಿಂದ ಕ್ಷೇತ್ರದ ಪ್ರಧಾನಗುರುಗಳಾದ ಶ್ರೀ ರಾಜೇಶ್‌ನಾಥ್‌ಜಿ ಅವರು ತ್ರಿವೇಣಿ ಸಂಗಮದಿಂದ ತಂದಿರುವ ಮಹಾಕುಂಭ ತೀರ್ಥ, ಗಂಗಾ ತೀರ್ಥದೊಂದಿಗೆ ಕಾವೇರಿ ತೀರ್ಥ ಹಾಗೂ ಶೃಂಗೇರಿಯ ತುಂಗಾನದಿಯ ತೀರ್ಥ ಸೇರಿದಂತೆ ಪಂಚ ತೀರ್ಥದಿಂದ ಭಕ್ತರಿಗೆ ತೀರ್ಥ ಸ್ನಾನ ಮಾಡಿಸಲಾಯಿತು. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರಿಗೆ ಮಹಾನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.ಸೋಮವಾರಪೇಟೆಯ ವಿರಕ್ತ ಮಠದ ಪೀಠಾಧಿಪತಿ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ, ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯನ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.ಕ್ಷೇತ್ರದ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಲ್ಲಿ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.ಎರಡು ದಿನಗಳ ಮಹಾಶಿವರಾತ್ರಿ ಉತ್ಸವದಲ್ಲಿ ಕುಶಾಲನಗರ ಹಾಗೂ ದೇವಾಲಯದ ಭಕ್ತರಿಂದ ಭಜನೆಗಳು ನಡೆಯಿತು.