ಮಹಾಶಿವರಾತ್ರಿ: ಮಂಡ್ಯ ಜಿಲ್ಲಾದ್ಯಂತ ಶಿವಾಲಯಗಳಲ್ಲಿ ಶಿವ ನಾಮಸ್ಮರಣೆ

| Published : Feb 27 2025, 12:32 AM IST

ಸಾರಾಂಶ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವ್ರತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬುಧವಾರ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಜಾಗರಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವ್ರತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.

ಮಂಡ್ಯದ ಅರ್ಕೇಶ್ವರನಗರದ ಶ್ರೀ ಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೪.೩೦ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಾರ್ಚನೆ, ಮುಂಜಾನೆಯಿಂದ ನಾಳೆ ಮುಂಜಾನೆಯವರೆಗೆ ಐದು ಜಾವಗಳ ಪೂಜೆ ನಡೆಯಿತು. ಪ್ರತೀ ಪೂಜೆಯ ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು.

ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿದ ಭಕ್ತರು ಧನ್ಯತಾ ಭಾವ ಮೆರೆದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ, ಭಜನಾ ಕಾರ್ಯಕ್ರಮಗಳು ನಡೆದವು. ಬಳಿಕ ನಾಳೆ ಬೆಳಗ್ಗೆ ಭಕ್ತಾಧಿಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ನಗರದ ಪ್ರಮುಖ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಸಕಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳ್ಳಿಯ ನಾಗಾಭರಣವನ್ನು ದೇವರಿಗೆ ತೊಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರನಗರದಲ್ಲಿರುವ ಶ್ರೀ ಮಲೈ ಮಹದೇಶ್ವರಸ್ವಾಮಿ, ಶಂಕರಮಠದ ಆದಿ ಚುಂಚನಗಿರಿ ಶಾಖಾ ಮಠದಲ್ಲಿರುವ ಶ್ರೀ ಗವಿಗಂಗಾಧರೇಶ್ವರ ಸ್ವಾಮಿಗೆ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನಡೆಸಲಾಗಿತ್ತು.

ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಕಲ್ಲಹಳ್ಳಿಯ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ ೯.೧೫ಕ್ಕೆ ಮಹಾರುದ್ರಾಭೀಷೇಕ, ಮಧ್ಯಾಹ್ನ ೧೨ ಗಂಟೆಗೆ ಅಭಿಜಿನ್ ಲಗ್ನದಲ್ಲಿ ದೇವರಿಗೆ ಮಹಾಮಂಗಳಾರತಿ, ನಂತರ ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಯಿತು.

ನಗರದ ಸ್ವರ್ಣಸಂದ್ರದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ನಿರಂತರವಾಗಿ ದೇಗುಲಕ್ಕೆ ಆಗಮಿಸಿ ದೇವರ ದರ್ಶನಪಡೆದರು. ಚಾಮುಂಡೇಶ್ವರಿನಗರದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀ ತಾಂಡವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ರುದ್ರಾಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.