ಕನ್ನಡಪ್ರಭ ವಾರ್ತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಡಗರದಿಂದ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ಮಂದಿರದಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರದ ನಸುಕಿನ ಜಾವದವರೆಗೂ ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ನಂತರ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಡಗರದಿಂದ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ಮಂದಿರದಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರದ ನಸುಕಿನ ಜಾವದವರೆಗೂ ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ನಂತರ ಧಾರ್ಮಿಕ ಕಾರ್ಯಕ್ರಮ ಜರುಗಿದವು.ಬೆಳಗಾವಿ ಮಾತ್ರವಲ್ಲದೆ; ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು. ಮಹಾಶಿವರಾತ್ರಿ ಪ್ರಯುಕ್ತ, ನಗರದ ವಿವಿಧ ಶಿವನ ದೇವಸ್ಥಾನಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದ್ದವು. ಕಣಬರ್ಗಿಯ ಸಿದ್ಧೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ ಮಂದಿರ, ಮಿಲಿಟರಿ ಮಹಾದೇವ ಮಂದಿರ, ಕಾಕತಿಯ ಸಿದ್ಧೇಶ್ವರ ದೇವಸ್ಥಾನ ಸೇರಿ ಹಲವು ದೇಗುಲಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವರಿಗೆ ಭಕ್ತರು ವಿವಿಧ ಕಾಣಿಕೆಗಳನ್ನು ಅರ್ಪಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು. ವಿಶೇಷ ಪೂಜೆ ಸಲ್ಲಿಸಿ, ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು. ಇನ್ನು, ಶಿವರಾತ್ರಿ ಉಪವಾಸ ವೃತ ಹಿನ್ನಲೆಯಲ್ಲಿ ಜನರು ಮನೆಗಳಲ್ಲಿ ಭಜನೆ, ಜಾಗರಣೆಗಳನ್ನು ನಡೆಸಿದರು.
ಇನ್ನು, ಮಹಾ ಶಿವರಾತ್ರಿಯ ನಿಮಿತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಕುಟುಂಬದ ಜೊತೆಗೆ ದಕ್ಷಿಣ ಕಾಶಿ ಖ್ಯಾತಿಯ ಬೆಳಗಾವಿಯ ಶ್ರೀ ಕಪಿಲೇಶ್ವರ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಆ ಪರಶಿವನು ನಾಡಿನ ಸಮಸ್ತ ಜನರಿಗೂ ಸುಖ-ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಕುಟುಂಬಸ್ಥರು ಇದ್ದರು.