ಸಾರಾಂಶ
ನರೇಗಾ: ಮಾನವ ದಿನಗಳಲ್ಲಿ ಸಾಧನೆಕನ್ನಡಪ್ರಭ ವಾರ್ತೆ ಮೈಸೂರುಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಮೂಲಕ ಉದ್ಯೋಗ ಕ್ರಾಂತಿ ನಡೆಸಲು ಮುಂದಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ಮಾನವ ದಿನಗಳಲ್ಲಿ ಶೇ.100 ರಷ್ಟು ಗುರಿ ಸಾಧಿಸಿದೆ.ಗ್ರಾಮೀಣ ಭಾಗದ ಜನರ ಜೀವನಕ್ಕೆ ಬಲವಾಗಿ ನಿಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2024- 25ನೇ ಸಾಲಿನಲ್ಲಿ ಶೇ.101.83 ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯಲ್ಲಿ 3,38,973 ಲಕ್ಷ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಇವುಗಳಲ್ಲಿ 1,46,368 ಕುಟುಂಬಗಳ ಜಾಬ್ ಕಾರ್ಡ್ ಗಳು ಸಕ್ರಿಯವಾಗಿದ್ದು, 277379 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಗುರಿ ಸಾಧಿಸಿರುವ ಆರು ತಾಲೂಕುಜಿಲ್ಲೆಯಲ್ಲಿ ಒಟ್ಟು 2400000 (24 ಲಕ್ಷ) ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಇದರಲ್ಲಿ ಜಿಲ್ಲೆ 2443834 ಗುರಿ ಸಾಧಿಸಿದ್ದು, ಶೇ.101.83 ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯ ಕೆ.ಆರ್. ನಗರ ತಾಲೂಕು ಶೇ.119.59 ರಷ್ಟು ಗುರಿ ಸಾಧಿಸಿ, ನಿಗದಿತ ಗುರಿ ಮೀರಿದ ಸಾಧನೆ ಮಾಡಿ ಜನ ಮೆಚ್ಚುಗೆಯ ಪ್ರಶಂಸೆಗೆ ಪಾತ್ರವಾಗಿದೆ. ಈ ತಾಲೂಕಿನಲ್ಲಿ ಒಟ್ಟು 151084 ಮಾನವ ದಿನ ಸೃಜನೆ ಗುರಿ ಹೊಂದಲಾಗಿದ್ದು, ಇದರಲ್ಲಿ 180678 ಮಾನವ ದಿನಗಳನ್ನು ಪೂರ್ತಿಗೊಳಿಸಿ ದಾಖಲೆ ಬರೆದಿದೆ.ಅಂತೆಯೇ ಟಿ. ನರಸೀಪುರ 356975 ಮಾನವ ದಿನ ಗುರಿಯಲ್ಲಿ 402286 ಪೂರೈಸಿ ಶೇ.112.69 ರಷ್ಟು ಸಾಧನೆ ಮಾಡಿದೆ. ಸರಗೂರು ತಾಲೂಕು 176261 ಮಾನವ ದಿನ ಗುರಿಯಲ್ಲಿ 194478 ಪೂರೈಸಿ ಶೇ.110.34 ಸಾಧಿಸಿದ್ದು, ಪಿರಿಯಾಪಟ್ಟಣ ತಾಲೂಕು 314707 ಮಾನವ ದಿನ ಗುರಿಯಲ್ಲಿ 332733 ಮಾನವ ದಿನ ಸೃಷ್ಟಿಸಿ ಶೇ.105.73 ಸಾಧನೆ ಮಾಡಿದೆ.ಸಾಲಿಗ್ರಾಮ ತಾಲೂಕು 155098 ಮಾನವ ದಿನ ಗುರಿಯಲ್ಲಿ 161140 ಮಾನವ ದಿನ ಸೃಷ್ಟಿಸಿ ಶೇ.103.90 ರಷ್ಟು ಸಾಧನೆ ಮಾಡಿದೆ. ಹಾಗೂ ಎಚ್.ಡಿ. ಕೋಟೆ ತಾಲೂಕು 387119 ಮಾನವ ದಿನಗಳಿಗೆ 401055 ಮಾನವ ದಿನಗಳನ್ನು ಪೂರೈಸಿ ಶೇ.103.60 ಗುರಿ ಸಾಧಿಸಿದೆ.ಈ ಮೂಲಕ 9 ತಾಲೂಕಿನಲ್ಲಿ ಆರು ತಾಲೂಕು ಶೇ.100 ಗುರಿ ಮೀರಿದ ಸಾಧನೆ ತೋರಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕ್ರಾಂತಿ ಆರಂಭಿಸಿದೆ. ಆ ಮೂಲಕ ದುಡಿಯುವ ಕೈ ಕೂಲಿ, ತಾವಿರುವಲ್ಲೇ ಉದ್ಯೋಗ ನೀಡಿ ಜನರ ವಲಸೆ ತಪ್ಪಿಸಿ ಗ್ರಾಮೀಣ ಜನರ ಸಬಲೀಕರಣದ ಸಾಧನೆ ಮಾಡಿದೆ. ಏನೆಲ್ಲಾ ಮಾಡಬಹುದು?ಅಂತರ್ಜಲ ಚೇತನ ಸಂರಕ್ಷಣೆ ಕಾಮಗಾರಿ, ರೈತರ ಕ್ರಿಯಾ ಯೋಜನೆ, ಹಸಿರೀಕರಣ ಕಾಮಗಾರಿ, ಶಾಲಾಭಿವೃದ್ಧಿ ಕಾಮಗಾರಿಗಳು, ಸಂಜೀವಿನಿ ಶೆಡ್ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿ, ಚರಂಡಿ ಹಾಗೂ ಇನ್ನಿತರ ಸಮುದಾಯ ಮತ್ತು ವೈಯುಕ್ತಿಕ ಕಾಮಗಾರಿಗಳನ್ನು ಸೇರಿಸಲಾಗಿದೆ. ಇದರಿಂದ ಜನರಿಗೆ, ರೈತರಿಗೆ ಹಾಗೂ ಕೆಲಸ ಮಾಡುವವರಿಗೆ ಪ್ರಯೋಜನ ಸಿಗುತ್ತಿದೆ.ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮ-ನರೇಗಾ ಯೋಜನೆ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರನ್ವಯ ಕರ್ನಾಟಕದಲ್ಲಿ 2024-25 ನೇ ಸಾಲಿನಲ್ಲಿ 349 ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏಪ್ರಿಲ್ 1 ರಿಂದ 370 ರೂ. ಕೂಲಿ ಜಾರಿಯಲ್ಲಿರುತ್ತದೆ.ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ 82775 06000 ಸ್ಥಾಪಿಸಲಾಗಿರುತ್ತದೆ. ಯಾವುದೇ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ 82775 06000 ಸಂಖ್ಯೆಗೆ ಕರೆ ಮಾಡಬಹುದು.----ಕೋಟ್...ಜಿಲ್ಲೆಯ 9 ತಾಲೂಕಿನಲ್ಲಿ 6 ತಾಲೂಕುಗಳು ನೂರರ ಗುರಿ ಸಾಧನೆ ಮೀರಿ ಜನರಿಗೆ ಉದ್ಯೋಗ ನೀಡಿರುವುದು ಸಂತಸ ತರಿಸಿದೆ. ಇದಕ್ಕೆ ಸರ್ಕಾರ ಮ-ನರೇಗಾದಡಿಯಲ್ಲಿ ಕೈಗೊಂಡ ಹಲವು ಯೋಜನೆಗಳು ಕಾರಣವಾಗಿದೆ. ಗ್ರಾಮೀಣ ಜನರ ಬದುಕಿಗೆ ಮ-ನರೇಗಾ ಎಂದೆಂದೂ ಊರುಗೋಲಾಗಿ ಕೆಲಸ ಮಾಡಲು ಸದಾ ಸಿದ್ಧವಿದೆ. ಗ್ರಾಮೀಣ ಭಾಗದ ಜನರು ಮತ್ತಷ್ಟು ಜಾಗೃತರಾಗಿ ಮ-ನರೇಗಾ ಯೋಜನೆ ಬಳಸಿಕೊಳ್ಳಬೇಕು.- ಎಸ್. ಯುಕೇಶ್ ಕುಮಾರ್, ಸಿಇಒ, ಮೈಸೂರು ಜಿಪಂ----ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನ ಸೇರಿದಂತೆ ಅನೇಕ ಅರಿವು ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದ ಪರಿಣಾಮ ಜಿಲ್ಲೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪುರುಷರು, ಮಹಿಳೆಯರು ಹಾಗೂ ಹಿರಿಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೃಷಿಯಲ್ಲಿ ಅನೇಕರ ಬದಕನ್ನೇ ನರೇಗಾ ಬದಲಿಸಿರುವ ಅನೇಕ ಉದಾಹರಣೆಗಳಿವೆ.- ಡಾ.ಎಂ. ಕೃಷ್ಣರಾಜು, ಉಪ ಕಾರ್ಯದರ್ಶಿ, ಜಿಪಂ