ಸಾರಾಂಶ
ಕಿಲ್ಪಾಡಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ನಿಧಿಯನ್ನು ಸಮರ್ಪಕವಾಗಿ ಬಳಸಿ ಪಾರದರ್ಶಕವಾಗಿ ಕಾಮಗಾರಿಗಳು ನಡೆದಿದ್ದು ಮಾದರಿ ಪಂಚಾಯಿತಿಯಾಗಿದೆ ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಧನಲಕ್ಷ್ಮಿ ಹೇಳಿದ್ದಾರೆ.ಕಿಲ್ಪಾಡಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ ಕಿಲ್ಪಾಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನೊ ವಹಿಸಿದ್ದರು.ಸಭೆಯಲ್ಲಿ ಗ್ರಾಮಸ್ಥ ಫಯಾಜ್ ಶೇಖ್ ಕೆ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಮಹರ್ಷಿ ಶಾಲೆ ಬಳಿ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆಯಿಂದ ಕೂಡಿದ್ದು ಹೇಳಿ ಹೇಳಿ ಸಾಕಾಗಿದೆ. ಯಾವುದೇ ರಾಜಕೀಯ ಮಾಡದೆ ರಸ್ತೆ ದುರಸ್ತಿಗೊಳಿಸಿ, ದಾರಿದೀಪ ಅವ್ಯವಸ್ಥೆ ಸರಿಪಡಿಸಿ, ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಆಗ್ರಹಿಸಿದರು.
ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ ಮಾತನಾಡಿ, ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾತನಾಡಿ, ಮುಂದಿನ ವರ್ಷದ ಕಾಮಗಾರಿಗಳಿಗೆ ಸದ್ಯದಲ್ಲಿ ಗ್ರಾಮಸಭೆ ನಡೆಸಲಿದ್ದು ಗ್ರಾಮಸ್ಥರು ಪೂರ್ವಭಾವಿಯಾಗಿ ಕಾಮಗಾರಿಗಳನ್ನು ಅಗತ್ಯವಾಗಿ ನೋಂದಾಯಿಸಬೇಕೆಂದು ಮನವಿ ಮಾಡಿದರು.
ನರೇಗಾ ಇಂಜಿನಿಯರ್ ರಿತೇಶ್ ಮತ್ತಿತರರು ಇದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿ ರೇಖಾಮಣಿ ನಿರೂಪಿಸಿದರು.