ಮಹಾತ್ಮಾ ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಿಸಿ ಡಾ. ಕೆ. ವಿದ್ಯಾಕುಮಾರಿ

| Published : Oct 03 2024, 01:17 AM IST

ಮಹಾತ್ಮಾ ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಿಸಿ ಡಾ. ಕೆ. ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸಾ ತತ್ವಗಳು ಇಂದು ಹೆಚ್ಚು ಪ್ರಸ್ತುತವಾಗಿದೆ. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಹಾತ್ಮಾ ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸಾ ತತ್ವಗಳು ಇಂದು ಹೆಚ್ಚು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಗಾಂಧೀಜಿಯವರಿಗೆ ಗೌರವ ಸಲ್ಲಿಸುವ ಮೂಲಕ ಗಾಂಧಿ ಜಯಂತಿ ದಿನಾಚರಣೆಯನ್ನು ಅರ್ಥಪೂರ್ಣವಾಗಿಸೋಣ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಅವರು ಬುಧವಾರ ಜಿಲ್ಲಾಡಳಿತ ವತಿಯಿಂದ ಇತರ ಸಂಘಟನೆಗಳ ಸಹಯೋಗದಲ್ಲಿ ನಗರದ ಅಜ್ಜರಕಾಡು ಪುರಭವನದಲ್ಲಿ ನಡೆದ 155 ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಚರಕದ ರಾಟೆಗೆ ನೂಲು ಹಾಕುವ ಮೂಲಕ ಚಾಲನೆ ನೀಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧೀಜಿಯವರ ಆತ್ಮಚರಿತ್ರೆಯನ್ನು ಓದಿದಾಗ ಅವರು ವಿಶ್ವ ನಾಯಕನಾಗಿ ಬೆಳೆಯುವ ಹಂತವನ್ನು ಹಾಗೂ ಇತರರ ಲೇಖನಗಳಲ್ಲಿ ಅವರ ಬದುಕಿನ ಏಳು-ಬೀಳುಗಳನ್ನು ಸಂಕ್ಷಿಪ್ತವಾಗಿ ಗಮನಿಸಿದಾಗ ಒಬ್ಬ ಸಾಮಾನ್ಯ ವ್ಯಕ್ತಿ ಮಹಾತ್ಮರಾಗಿರುವುದನ್ನು ಕಾಣಬಹುದಾಗಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಯಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.

ತೆಂಕನಿಡಿಯೂರು ಸಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ. ಉಪನ್ಯಾಸ ನೀಡಿ, ಇಂದು ಗಾಂಧೀಜಿಯವರ ಜಯಂತಿಯ ಜೊತೆಗೆ ಅಂತಾರಾಷ್ಟ್ರೀಯ ಶಾಂತಿ ದಿನ ಹಾಗೂ ದಿಟ್ಟ ನಿರ್ಧಾರಗಳ ಅಸಮಾನ್ಯ ನಾಯಕರಾದ ಲಾಲ್ ಬಹದ್ದೂರು ಶಾಸ್ತ್ರೀಯವರ ಜನ್ಮ ದಿನವೂ ಆಗಿದೆ ಎಂದರು.

ಈ ಸಂದರ್ಭ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಗಾಂಧೀಜಿಯವರ ಸವಿನೆನಪುಗಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಡಿಸಿ ಮಮತಾ ದೇವಿ ಜಿ.ಎಸ್, ಎಎಸ್ಪಿ ಎಸ್. ಟಿ.ಸಿದ್ದಲಿಂಗಪ್ಪ, ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ರಾಯಪ್ಪ ಸ್ವಾಗತಿಸಿದರು. ದಯಾನಂದ ನಿರೂಪಿಸಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಿಸಿ, ಎಡಿಸಿ, ಎಸ್ಪಿ, ಸಿಇಓ ಭಾಗವಹಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ನಡಿಗೆ ನಡೆಯಿತು. ನಂತರ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.