ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಅ.2 ರಿಂದ ಮಹಾತ್ಮಾ ಗಾಂಧಿ ಸುಧಾರಣೋತ್ಸವ ಅಭಿಯಾನವನ್ನು ಹಮ್ಮಿಕೊಳ್ಳಲು ತಾಲೂಕಿನ ವ್ಯಾಪ್ತಿಯ ಗ್ರಾಪಂಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗದಗ

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಅ.2 ರಿಂದ ಮಹಾತ್ಮಾ ಗಾಂಧಿ ಸುಧಾರಣೋತ್ಸವ ಅಭಿಯಾನವನ್ನು ಹಮ್ಮಿಕೊಳ್ಳಲು ತಾಲೂಕಿನ ವ್ಯಾಪ್ತಿಯ ಗ್ರಾಪಂಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ತಾಪಂ ಇಒ ಡಾ. ಎಚ್.ಎಸ್. ಜನಗಿ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಸೂಚನೆಯಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಆದೇಶ ಮಾಡಿದೆ. ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ಹಾಗೂ ಸವಲತ್ತುಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಹಲವು ಪ್ರಮುಖ ಸುಧಾರಣೆಗಳು ಮತ್ತು ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗ್ರಾಮಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಲು ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಜನರ ಯೋಜನೆ ಅಭಿಯಾನದ ಅಂಗವಾಗಿ ಮಹಾತ್ಮಗಾಂಧಿ ಸುಧಾರಣೋತ್ಸವವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 2027-28ನೇ ಸಾಲಿನ ಕಾರ್ಮಿಕ ಆಯವ್ಯಯವನ್ನು ಮತ್ತು ಗ್ರಾಪಂ ಅಭಿವೃದ್ಧಿ ಯೋಜನೆಯೊಂದಿಗೆ ಸಮನ್ವಯಗೊಳಿಸಿ ಸಿದ್ಧಪಡಿಸಬೇಕಾಗಿರುತ್ತದೆ. ಈ ಯೋಜನೆಯಡಿ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆ ಮೂಲಕ ಸ್ಯಾಚುರೇಶನ್ ಆಧಾರಿತವಾಗಿ ಗ್ರಾಮೀಣ ಮೂಲಸೌಕರ್ಯಗಳನ್ನು ಸೃಜಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಕಾಮಗಾರಿಗಳು ಸೇರಿದಂತೆ ಒಗ್ಗೂಡಿಸುವಿಕೆ ಕಾಮಗಾರಿಗಳನ್ನು ಯುಕ್ತಧಾರ ತಂತ್ರಾಂಶದ ಮೂಲಕ ಗುರುತಿಸಿ, ಸ್ಥಳ ಪರಿಶೀಲನೆ ನಡೆಸಿ, ತಂತ್ರಾಂಶದಲ್ಲಿ ಇಂಧೀಕರಿಸಬೇಕಿದೆ. ಈ ಸಂಬಂಧ ಈಗಾಗಲೇ ಅನುಷ್ಠಾನ ಹಂತದ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಸೂಚಿಸಿದ ನಿರ್ದೇಶನಗಳಂತೆ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ ಎಂದರು.

ವ್ಯಾಪಕ ಪ್ರಚಾರ ಮತ್ತು ಜನಜಾಗೃತಿ:ಮಹಾತ್ಮಗಾಂಧಿ ಸುಧಾರಣೋತ್ಸವ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ಜಾಗೃತಿ ಜಾಥಾಗಳು, ಸ್ವ-ಸಹಾಯ ಸಂಘಗಳ ಸಭೆಗಳು ಮತ್ತು ಸ್ವಚ್ಛತಾ ವಾಹಿನಿಗಳ ಮೂಲಕ ಧ್ವನಿವರ್ಧಕ ಶ್ರಾವ್ಯ ಸಂದೇಶಗಳ ಪ್ರಸಾರವನ್ನು ಕೈಗೊಳ್ಳಲು ತಿಳಿಸಲಾಗಿದೆ.

ಗ್ರಾಮಸಭೆಗಳ ಆಯೋಜನೆ ಮತ್ತು ಅನುಮೋದನೆ:

ಅ.2 ರಿಂದ ಎಲ್ಲಾ ಗ್ರಾಪಂಗಳಲ್ಲಿ ಮಹಾತ್ಮಾ ಗಾಂಧಿ ಸುಧಾರಣೋತ್ಸವ ಗ್ರಾಮಸಭೆಗಳನ್ನು ಕಡ್ಡಾಯವಾಗಿ ಆಯೋಜಿಸಬೇಕಿದೆ. ಈ ಸಭೆಗಳಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ಅನುಮತಿಸಲಾದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ ನಿಯಮಾನುಸಾರ ಗ್ರಾಮಸಭೆಯ ಅನುಮೋದನೆ ಪಡೆಯುವಂತೆ ಆದೇಶದಂತೆ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಜಿಪಂ ಎಡಿಪಿಸಿ ಕಿರಣಕುಮಾರ ಎಸ್.ಎಚ್. ವಿಕಸಿತ ಗ್ರಾಪಂ ಪ್ಲಾನ್ ಕುರಿತು ಮಾಹಿತಿ ನೀಡಿದರು.

ಈ ವೇಳೆ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಶಿವಕುಮಾರ ವಾಲಿ ಸೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ವಿಬಿಜಿ ರಾಮ್‌ಜಿ ಸಿಬ್ಬಂದಿ, ಗ್ರಾಪಂ ಗಣಕಯಂತ್ರ ನಿರ್ವಾಹಕರು ಇತರರು ಇದ್ದರು.