ಮಹಾತ್ಮ ಗಾಂಧೀಜಿ ಬದುಕು ನಿಷ್ಕಳಂಕ, ಪರಿಶುದ್ಧವಾದದ್ದು: ಡಾ.ವೂಡೇ ಪಿ.ಕೃಷ್ಣ

| Published : Nov 25 2025, 01:30 AM IST

ಮಹಾತ್ಮ ಗಾಂಧೀಜಿ ಬದುಕು ನಿಷ್ಕಳಂಕ, ಪರಿಶುದ್ಧವಾದದ್ದು: ಡಾ.ವೂಡೇ ಪಿ.ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ ಹಳ್ಳಿಗಳ ಅಭಿವೃದ್ಧಿಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗೆ ಮಹಾತ್ಮ ಎಂಬ ಬಿರುದು ನೀಡಿದರು. ಗಾಂಧೀಜಿ ಅವರ ಬದುಕು ನಿಷ್ಕಳಂಕ, ಪರಿಶುದ್ಧವಾದ ಬದುಕು. ಅಪಪ್ರಚಾರಗಳಿಗೆ ಕಿವಿಗೊಡದೆ ಪ್ರತಿಯೊಬ್ಬರು ಮುಕ್ತ ಮನಸ್ಸಿನಿಂದ ಗಾಂಧೀಜಿ ವಿಚಾರ ಓದಿ ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧೀಜಿ ಅವರು ಅಹಿಂಸಾ ಹೋರಾಟದ ಜತೆಗೆ ಮೂಲಭೂತವಾದಿ, ಹಿಂಸೆಯ ಪ್ರತಿಪಾದಿ ಹಾಗೂ ಕೋಮುವಾದಿಗಳ ವಿರೋಧಿಯಾಗಿದ್ದರು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.

ಪಟ್ಟಣದ ವಿದ್ಯಾ ಪ್ರಚಾರ ಸಂಘ ವಿಜಯ ಪ್ರಥಮ ಕಾಲೇಜು ಮತ್ತು ವಿಜಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಜ್ಯ ಪತ್ರಗಾರ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ಚಿನಕುರಳಿ, ಪ್ರಥಮ ದರ್ಜೆ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘ, ಬಿಇಡಿ ಕಾಲೇಜಿನ ಅಧ್ಯಾಪಕರ ಸಂಘ, ಮಂಡ್ಯ ವಿಶ್ವವಿದ್ಯಾಲಯದಿಂದ ನಡೆದ ಮರಳಿ ಮನೆಕೆ-ಗಾಂಧಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತಿ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ ಹಳ್ಳಿಗಳ ಅಭಿವೃದ್ಧಿಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗೆ ಮಹಾತ್ಮ ಎಂಬ ಬಿರುದು ನೀಡಿದರು.ಗಾಂಧೀಜಿ ಅವರ ಬದುಕು ನಿಷ್ಕಳಂಕ, ಪರಿಶುದ್ಧವಾದ ಬದುಕು. ಅಪಪ್ರಚಾರಗಳಿಗೆ ಕಿವಿಗೊಡದೆ ಪ್ರತಿಯೊಬ್ಬರು ಮುಕ್ತ ಮನಸ್ಸಿನಿಂದ ಗಾಂಧೀಜಿ ವಿಚಾರ ಓದಿ ಸ್ಮರಿಸಬೇಕು ಎಂದರು.

ಸಮಾಜದಲ್ಲಿ ಮನುಷ್ಯ ಸಂಬಂಧಗಳು ಆಳಾಗುತ್ತಿವೆ. ತತ್ವರಹಿತ ಕೆಟ್ಟ ರಾಜಕೀಯ, ಜಾತೀಯತೆ ಸಮಾಜದಲ್ಲಿದೆ. ಅಧಿಕಾರ ಹಿಡಿಯುವುದಕ್ಕಾಗಿ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸತ್ಯ, ಅಹಿಂಸೆ, ಸೇವೆ, ತ್ಯಾಗದ ಅಡಿಗಲ್ಲಿನಿಂದ ಕಟ್ಟಿದ ದೇಶವನ್ನು ನಾವೆಲ್ಲರು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು.

ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಇಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಮಹಾತ್ಮಗಾಂಧೀಜಿ ಹಾಗೂ ಮಹರ್ಷಿ ನಾಲ್ವಡಿ ಅವರ ವಿಚಾರಧಾರೆ, ಚಿಂತನೆ, ಸಿದ್ಧಾಂತಗಳ ಅರಿವಿನ ಅಗತ್ಯವಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯವರ ದೂರದ ಆಲೋಚನೆಯಿಂದಾಗಿ ನಾವೆಲ್ಲರು ನೆಮ್ಮದಿಯಿಂದ ಬದುಕವಂತಾಗಿದೆ. ಮಹಾನ್ ನಾಯಕರ ವ್ಯಕ್ತಿತ್ವ, ನಡೆದು ಬಂದಂತಹ ದಾರಿಯನ್ನು ವಿದ್ಯಾರ್ಥಿಗಳಿಗೆ ಪರಿಚಹಿಸಬೇಕೆಂಬ ಕಾರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಇಂತಹ ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪತ್ರಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಮಾತನಾಡಿ, ರಾಜ್ಯ ಪತ್ರಗಾರ ಇಲಾಖೆಯ ಬಗ್ಗೆ ಸಾಕಷ್ಟು ಮಂದಿಗೆ ಅರಿವಿಲ್ಲವಾಗಿದೆ. ನಮ್ಮ ಇಲಾಖೆ ಇತಿಹಾಸಕ್ಕೆ ಪೂರಕವಾದ ದಾಖಲೆ ಸಂಗ್ರಹಿಸಿ ಅದನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಸಂಸ್ಥೆ ಕಾರ್ಯದರ್ಶಿ ಕೆ.ವಿ.ಬಸವರಾಜು, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಜಗದೀಶ್ ಗೋಪಾಲನ್ ಮಾತನಾಡಿದರು.

ಇದೇ ವೇಳೆ ‘ಗಾಂಧೀಜಿ ಸತ್ಯ ಮತ್ತು ಅಹಿಂಸೆ ಜೊತೆಗಿನ ಪ್ರಯೋಗಗಳು’ ವಿಷಯ ಕುರಿತು ಹಾಸನದ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ರೋಹಿತ್ ಉಪನ್ಯಾಸ ನೀಡಿದರು. ಮೈಸೂರಿನ ಕುವೆಂಪು ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಬೆಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿಶೈಕ್ಷಣಿಕ ಸಲಹೆಗಾರ ಡಾ.ಎಸ್.ತುಕಾರಾಮ್ ಅವರು ‘ಏಳು ಸಾಮಾಜಿಕ ಪಾಪಗಳಿಗೆ ಗಾಂಧಿಜೀಯವರ ಉತ್ತರ’ ಕುರಿತು ಹಾಗೂ ಹಂಪಿ ವಿವಿ ಇತಿಹಾಸ ಉಪನ್ಯಾಸಕ ಡಾ.ಚಿನ್ನಸ್ವಾಮಿ ಸೋಸಲೆ ಅವರು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಕ್ಷಣಿಕ ಚಿಂತನೆಗಳು’ ಕುರಿತು ಉಪನ್ಯಾಸ ನೀಡಿದರು. ಮಂಡ್ಯ ಶಂಕರೇಗೌಡ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಜಿ.ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಮೈಸೂರಿನ ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಮ್ಮ ತುಳಿಸಿದಾಸ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಕ್ರೀಡಾ ಇಲಾಖೆ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ಮಂಡ್ಯ ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಎಂ.ಬಿ.ಪ್ರಮೀಳ, ಪ್ರಾಧ್ಯಾಪಕ ಸಿ.ಎಸ್.ಸಿದ್ದರಾಮಯ್ಯ, ಸಂಸ್ಥೆ ಉಪಾಧ್ಯಕ್ಷೆ ಶಾಂತಮ್ಮ, ಪ್ರಾಂಶುಪಾಲ ಪ್ರೊ.ಎಂ.ಕೃಷ್ಣಮೂರ್ತಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎನ್.ಕೆ.ವೆಂಕಟೇಗೌಡ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಉಪನ್ಯಾಸಕರು ಭಾಗವಹಿಸಿದ್ದರು.