ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆದರ್ಶಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಹಾಗೂ ತತ್ವ ಸಂದೇಶಗಳನ್ನು ಪಾಲಿಸಿದರೆ ಆರೋಗ್ಯವಂತ ಸಮಾಜ ಸುಲಭವಾಗಿ ನಿರ್ಮಿಸಬಹುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಇಂದು ಪ್ರತಿಯೊಂದನ್ನು ಹಿಂಸೆ ಮೂಲಕವೇ ಪಡೆಯುವ ಕಡೆ ನಮ್ಮ ಸಮಾಜ ಹೋಗುತ್ತಿದೆ. ಇದನ್ನು ತೊಡೆದು ಹಾಕಿ ಸಮಾಜಕ್ಕೆ ಮಹಾತ್ಮ ಗಾಂಧಿಯವರ ಅಹಿಂಸಾ ಮಾರ್ಗ ಪರಿಚಯಿಸಬೇಕಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

ಪಟ್ಟಣದ ಹೊರವಲಯದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ವಿಭಾಗಗಳ ವತಿಯಿಂದ ಸಂಘಟಿಸಿದ್ದ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆದರ್ಶಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಹಾಗೂ ತತ್ವ ಸಂದೇಶಗಳನ್ನು ಪಾಲಿಸಿದರೆ ಆರೋಗ್ಯವಂತ ಸಮಾಜ ಸುಲಭವಾಗಿ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಯುವಜನರನ್ನು ದಿಕ್ಕು ತಪ್ಪಿಸಿ ಹಾಳು ಮಾಡುತ್ತಿದ್ದಾರೆ. ಭ್ರಷ್ಟಾಚಾರವು ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಹೆಚ್ಚಾಗಿದೆ. ಭವಿಷ್ಯದ ಭಾರತದ ಹಿತ ದೃಷ್ಟಿಯಿಂದ ಈ ಬೆಳವಣಿಗೆಯು ಒಳ್ಳೆಯದಲ್ಲ ಎಂದರು.

ಗಾಂಧೀಜಿಯವರ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ನಡೆಸಿ ವ್ಯಸನಕ್ಕೆ ಒಳಗಾಗಿರುವ ಗ್ರಾಮೀಣ ಪ್ರದೇಶದ ಬಡ ಜನರನ್ನು ವ್ಯಸನ ಮುಕ್ತಗೊಳಿಸಿ ಮತ್ತೆ ನವಜೀವನಕ್ಕೆ ಕಾಲಿಡುವಂತೆ ಮಾಡಿ ನೊಂದವರ ಬದುಕಿನಲ್ಲಿಯೂ ಸಂತೋಷ ಸಂಭ್ರಮವನ್ನು ತುಂಬುತ್ತಿರುವ ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಕಾರ್ಯವು ಇಡೀ ನಾಗರಿಕ ಸಮಾಜವೇ ಮೆಚ್ಚುವಂತಿದೆ ಎಂದರು.

ಶಾಸಕ ಎಚ್.ಟಿ.ಮಂಜು ಅವರ ಪತ್ನಿ ರಮಾ ಮಂಜು ಅವರು ಯೋಜನೆಯಿಂದ ಉನ್ನತ ಶಿಕ್ಷಣ ಮಾಡುತ್ತಿರುವ ಸ್ವಯಂ ಸೇವಾ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಸಹಾಯ ಧನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.

ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ರೋಹಿತ್ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ, ಶಿಕ್ಷಣ ಇಲಾಖೆ ಯತೀಶ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಜಯರಾಂ ತೋಟಿ, ಉಪಾಧ್ಯಕ್ಷೆ ನಳಿನಿ, ಮಾಜಿ ಅಧ್ಯಕ್ಷ ಕೆ.ಎಸ್.ರಾಜೇಶ್, ಸದಸ್ಯರಾದ ಡಿ.ಸಿ.ಕುಮಾರ್, ಶಿವರಾಂ, ಪ್ರಸನ್ನ, ಎನ್.ಎಸ್.ಮಂಜುನಾಥ್, ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿಗಳಾದ ತಿಲಕ್ ರಾಜ್, ಶ್ರೀನಿವಾಸ್, ಚೌಡೇಶ್ವರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಸಿ.ವಾಸು ಉಪಸ್ಥಿತರಿದ್ದರು.