ಗಾಂಧೀಜಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತತ್ವ, ಸಿದ್ಧಾಂತಗಳು, ಗುರಿ, ಉದ್ದೇಶ, ಮೂಲ ಕರ್ತವ್ಯಗಳನ್ನು ಜನರು ಪಾಲನೆ ಮಾಡಿದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗಾಂಧೀಜಿ ಅವರ ಆದರ್ಶ ಚಿರಸ್ಥಾಯಿಯಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಾತ್ಮ ಗಾಂಧೀಜಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆದರ್ಶಗಳು ಸಮಾಜಕ್ಕೆ ಬೇಕಾಗಿದೆ ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ವಿದ್ಯಾ ಪ್ರಚಾರ ಸಂಘದ ವಿಜಯ ಕಾಲೇಜಿನಲ್ಲಿ ಆಯೋಜಿಸಿದ್ದ ಮರಳಿ ಮನಕೆ-ಗಾಂಧಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತಿ’ ವಿಚಾರ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಗಾಂಧೀಜಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತತ್ವ, ಸಿದ್ಧಾಂತಗಳು, ಗುರಿ, ಉದ್ದೇಶ, ಮೂಲ ಕರ್ತವ್ಯಗಳನ್ನು ಜನರು ಪಾಲನೆ ಮಾಡಿದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗಾಂಧೀಜಿ ಅವರ ಆದರ್ಶ ಚಿರಸ್ಥಾಯಿಯಾಗಿರುತ್ತದೆ. ಅವರ ವಿಚಾರಾಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.ನಮ್ಮ ಜನರು ಸ್ವಾತಂತ್ರ್ಯ ಹೋರಾಟದ ಅಪ್ರತಿಮ ನಾಯಕರ ಭಾವನೆ, ಆದರ್ಶ, ನಿಲುವುಗಳನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ. ಆದರೆ, ಸಮಾಜದಲ್ಲಿ ಇರುವ ಕೆಲವು ವಿಕೃತ ಮನಸ್ಸಿನವರು ಗಾಂಧೀಜಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರಸ್ತತ ಸಮಾಜದಲ್ಲಿ ನಮ್ಮ ಮಕ್ಕಳಿಗೆ ನಾವು ಸಮಾಜ-ವಿಜ್ಞಾನ ವಿಷಯದಲ್ಲಿ ಓದಿಸುವುದಕ್ಕಿಂತ ಹೆಚ್ಚಾಗಿ ವ್ಯವಹಾರಿಕೆ ಜ್ಞಾನಕ್ಕೆ ಸಂಬಂಧಿಸಿದ ವಿಷಯ ಬೋಧನೆ ಮಾಡಲು ಮುಂದಾಗುತ್ತಿದ್ದೇವೆ. ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೇಕು. ಅದರ ಜತೆಗೆ ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಸಮಾಜ- ವಿಜ್ಞಾನ ವಿಷಯಗಳ ಕಡೆಗೂ ಅಧ್ಯಯನ ಮಾಡಿಸಬೇಕಾಗಿದೆ ಎಂದರು.ಮಾಜಿ ಶಾಸಕ ಡಿ.ಆರ್.ಪಾಟೀಲ್ ಮಾತನಾಡಿ, ಬದಲಾವಣೆ ಎನ್ನುವುದು ಮೊದಲು ನಮ್ಮೊಳಗೆ ಆಗಬೇಕು. ನಾವು ಬದಲಾದರೆ ಸಮಾಜ, ನಮ್ಮ ಸುತ್ತಮುತ್ತಲಿನವರು ತಾವಾಗೆಯೇ ಬದಲಾಗುತ್ತಾರೆ ಎಂದರು.
ಸಮಾಜದಲ್ಲಿ ಹೆಣ್ಣು ಮಕ್ಕಳೇ ಉತ್ತಮ ತ್ಯಾಗಮಯಿಗಳು. ಹೆಣ್ಣು ಮಕ್ಕಳಲ್ಲಿ ಕೃತಜ್ಞನತಾ ಭಾವನೆ, ಕಷ್ಟಕ್ಕೆ ಸ್ಪಂದಿಸುವ ಹೃದಯವಿದೆ. ಹಾಗಾಗಿ ಹೆಣ್ಣುಮಕ್ಕಳು ಜೀವಂತ ಇರುವ ದೇವರುಗಳು. ಆ ನಂತರ ಬಡವರು ನಮ್ಮ ಸಮಾಜದ ದೇವರು ಎಂದು ಬಣ್ಣಿಸಿದರು.ಸಮಾರಂಭದಲ್ಲಿ ಮೈಸೂರಿನ ಪತ್ರಗಾರ ಇಲಾಖೆ ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ್, ವಿಸ್ಮಯ ಪ್ರಕಾಶನ ಪ್ರಕಾಶ್ ಚಿಕ್ಕಪಾಳ್ಯ, ಸಂಸ್ಥೆ ಕಾರ್‍ಯದರ್ಶಿ ಕೆ.ವಿ.ಬಸವರಾಜು, ಮಂಡ್ಯ ವಿವಿ ಬಿ.ಇಡಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಚನ್ನ ಕೃಷ್ಣಯ್ಯ, ಗೌರವ ಅಧ್ಯಕ್ಷ ಡಾ.ಎಸ್.ಎಲ್.ಸುರೇಶ್, ಇತಿಹಾಸ ಅಧ್ಯಾಪಕದ ಸಂಘದ ಕಾರ್‍ಯದರ್ಶಿ ಡಾ.ಎ.ಸಿ.ಮಂಜುಳ, ಚಿನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು, ಗಾಂಧಿ ಸ್ಮಾರಕ ನಿಧಿ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ಭೂ ದಾಖಲೆಗಳ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ಎಸ್.ಮರಿಸ್ವಾಮಿಗೌಡ, ಪರಿವರ್ತನಾ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಪ್ರೊ.ಎನ್.ರಾಮು, ಪ್ರಾಂಶುಪಾಲ ಕೃಷ್ಣಮೂರ್ತಿ, ವಿಜಯ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎನ್.ಕೆ.ವೆಂಕಟೇಗೌಡ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.